ಜಿಲ್ಲೆ

ಗೊಂದಿಬಸವನಹಳ್ಳಿ ರಸ್ತೆ ಉದ್ಘಾಟನೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದ್ದು ಬುಧವಾರ ಶಾಸಕ ಡಾ.ಮಂತರ್ ಗೌಡ ಈ ನೂತನ ರಸ್ತೆಯನ್ನು ಉದ್ಘಾಟಿಸಿದರು.

ದಶಕಗಳಿಂದ ಗೊಂದಿಬಸವನಹಳ್ಳಿ ರಸ್ತೆ ಗುಂಡಿಮಯವಾಗಿತ್ತು. ಗ್ರಾಮಸ್ಥರ ಕೋರಿಕೆ ಮೇರೆಗೆ ಶಾಸಕರ ವಿಶೇಷ ಪ್ರಯತ್ನದಿಂದ 1 ಕೋಟಿ ರೂ. ಅನುದಾನ ತಂದು ದಶಕಗಳ ಕನಸು ನನಸು ಮಾಡಿದ ಶಾಸಕ ಡಾ.ಮಂತರ್ ಗೌಡ ಅವರಿಗೆ ಗ್ರಾಮದ ಪುರಸಭೆ ಸದಸ್ಯ ಜಗದೀಶ್ ಹಾಗೂ ಎಂ.ಎA. ಪ್ರಕಾಶ್ ಈ ಸಂದರ್ಭ ಗ್ರಾಮದ ಪರವಾಗಿ ಸನ್ಮಾನಿಸಿ ಗೌರವಿಸಿದರು.

ಸಾರ್ವಜನಿಕರ ಉಪಯೋಗಕ್ಕೆ ರಸ್ತೆ ಮುಕ್ತಗೊಳಿಸಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಗೊಂದಿಬಸವನಹಳ್ಳಿ ಗ್ರಾಮದವರೆಗೆ ಈಗ ರಸ್ತೆ ಅಭಿವೃದ್ಧಿ ಆಗಿದೆ. ಮುಂದಿನ ದಿನಗಳಲ್ಲಿ ಅತ್ತೂರು ರಸ್ತೆಗೆ ಜೋಡಣೆ ಮಾಡಿ ಸಂಪೂರ್ಣ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತದೆ. ಈ ರಸ್ತೆ ಅಭಿವೃದ್ಧಿಯಿಂದ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ ಎಂದರು.

ಈ ಸಂದರ್ಭ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ ಚಂದ್ರಕಲಾ, ಸದಸ್ಯ ಮಂಜುನಾಥ್ ಗುಂಡೂರಾವ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮುಖಂಡರಾದ ಶಿವಕುಮಾರ್, ಶಶಿಭೀಮಯ್ಯ,ರಂಜನ್ ಹೆಬ್ಬಾಲೆ, ಚಂದ್ರು, ಕೃಷ್ಣಪ್ಪ, ಉಸ್ಮಾನ್ ಇತರರು ಇದ್ದರು.