ಕುಶಾಲನಗರ:
ನಮ್ಮ ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಸÀರ್ಕಾರ ಅಗತ್ಯ ಅನುದಾನ ಒದಗಿಸುತ್ತಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು.
ಕೊಣನೂರು ಮಾಕುಟ್ಟ ರಾಜ್ಯ ಹೆದ್ದಾರಿ 91ರ ಕುಶಾಲನಗರದಿಂದ ಕೂಡಿಗೆವರೆಗೆ ಆಯ್ದ ಭಾಗಗಳಲ್ಲಿ 4.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಕೂಡುಮಂಗಳೂರು ಗ್ರಾಮದಲ್ಲಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕಾಂಗ್ರೆಸ್ ಸÀರ್ಕಾರ ಗ್ಯಾರೆಂಟಿ ಯೋಜನೆಗಳು ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೂ ಸಮರ್ಪಕವಾಗಿ ಅನುದಾನ ಒದಗಿಸುತ್ತಿದೆ. ಅಭಿವೃದ್ಧಿಯೇ ನಮ್ಮ ಆದ್ಯತೆ. ಕೂಡಿಗೆ- ಕುಶಾಲನಗರ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿರುವ ಕಾರಣ ಗುಣಮಟ್ಟದ ರಸ್ತೆ ಅಗತ್ಯವಿದೆ. ಕುಶಾಲನಗರ-ಕೂಡಿಗೆ ಹೆದ್ದಾರಿ ಅಭಿವೃದ್ದಿಯೊಂದಿಗೆ ಶಿರಂಗಾಲದಿAದ ಕೂಡಿಗೆವರೆಗೆ ಕೂಡ ರಸ್ತೆ ಅಭಿವೃದ್ಧಿ ಯೋಜನೆ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಚುನಾಯಿತರಾದ ಅಲ್ಪ ಕಾಲದಲ್ಲಿಯೇ ಮಂತರ್ ಗೌಡ ಅಭಿವೃದ್ಧಿ ಯೋಜನೆಗಳನ್ನು ಒಂದೊAದಾಗಿ ಅನುಷ್ಠಾನಕ್ಕೆ ತರುತ್ತಿರುವುದು ಹೆಮ್ಮೆಯ ಸಂಗತಿ. ಅಭಿವೃದ್ಧಿ ಕುಂಠಿತ ಎಂದು ಟೀಕೆ ಮಾಡುವವರಿಗೆ ಕ್ಷೇತ್ರಕ್ಕೆ ಮಂಜೂರಾದ ಅನುದಾನ ಹಾಗೂ ಅನುಷ್ಠಾನಗೊಂಡ ಅಭಿವೃದ್ದಿ ಯೋಜನೆಗಳ ಸಮರ್ಪಕ ಮಾಹಿತಿ ಒದಗಿಸಲು ನಾವು ಸಿದ್ದರಿದ್ದೇವೆ. ಒಂದೇ ಕ್ಷೇತ್ರಕ್ಕೆ ಮೂರು ಇಂದಿರಾ ಕ್ಯಾಂಟಿನ್ ಒಟ್ಟಿಗೆ ತಂದ ಕೀರ್ತಿ ಶಾಸಕರಿಗೆ ಸಲ್ಲಬೇಕಿದೆ ಎಂದರು.
ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ವಿ. ಸಣ್ಣಪ್ಪ, ಸದಸ್ಯರಾದ ಸುರೇಶ್, ಸಾಗರ್, ಈರಪ್ಪ, ಕುಶಾಲನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ತಾಲೂಕು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್, ಪಿಡಿಒ ಸಂತೋಷ್ ಮತ್ತಿತರರು ಇದ್ದರು.