ಯೋಗರಾಜ ಎಸ್.ಕೆ. ಹಳಿಯಾಳ
ಗ್ರಾಮೀಣ ಪ್ರದೇಶಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸರ್ಕಾರ ತಾಲೂಕಿನಾದ್ಯಂತ 82 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿತ್ತು. ಆದರೆ, ಇವುಗಳ ಪೈಕಿ 46 ಘಟಕಗಳು ಈಗಾಗಲೇ ಬಂದ್ ಆಗಿದ್ದು, ಜನರಿಗೆ ಫ್ಲೋರೈಡ್ಯುುಕ್ತ ಕೊಳವೆಬಾವಿಗಳ ನೀರೇ ಗತಿಯಾಗಿದೆ. ತಾಲೂಕಿನ ತತ್ವಣಗಿ ಗ್ರಾಮ ಪಂಚಾಯಿತಿಗೆ ಒಳಪಡುವ ಜೋಗನಕೊಪ್ಪ ಗ್ರಾಮ ಸಾವಿರಕಿಂತ ಅಧಿಕ ಜನಸಂಖ್ಯೆ ಹೊಂದಿದೆ. ಇಲ್ಲಿ ಕನ್ನಡ ಮತ್ತು ಉರ್ದು ಮಾಧ್ಯಮ ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಹುಬ್ಬಳ್ಳಿಯ ಯಶಸ್ವಿ ಅಕ್ವಾಟೆಕ್ ಸಂಸ್ಥೆ ಗುತ್ತಿಗೆ ಪಡೆದು ಕಾಮಗಾರಿ ಮುಗಿಸಿ ಹಸ್ತಾಂತರಿಸಿದ್ದರು. ಉದ್ಘಾಟನೆಗೊಂಡು ಕೆಲ ತಿಂಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ ಈ ಘಟಕ ನಂತರ ದುರಸ್ತಿ ಬರಲಾರಂಭಿಸಿತು. ಸಮರ್ಪಕ ನಿರ್ವಹಣೆ ಇಲ್ಲದೆ ಕಳೆದ ನಾಲ್ಕು ವರ್ಷಗಳಿಂದ ಸಂಪೂರ್ಣವಾಗಿ ಬಂದ್ ಆಗಿದೆ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಘಟಕದ ಅಕ್ಕಪಕ್ಕ ಗಿಡಗಂಟಿಗಳು ಬೆಳೆದಿವೆ. ಎದುರಿನಲ್ಲಿಯೇ ಚಿರೆ ಕಲ್ಲುಗಳ (ಇಟ್ಟಂಗಿ) ದಾಸ್ತಾನು ಮಾಡಿ ಘಟಕವನ್ನು ಸಂಪೂರ್ಣ ಮುಚ್ಚಲಾಗಿದೆ. ಘಟಕವನ್ನು ಶೀಘ್ರ ಪುನರಾರಂಭ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ
ಇದು ಕೇವಲ ಜೋಗನಕೊಪ್ಪ ಗ್ರಾಮದ ಸಮಸ್ಯೆ ಅಲ್ಲ. ಕೆ.ಕೆ. ಹಳ್ಳಿ, ಗುಂಡೊಳ್ಳಿ, ಬಸವಳ್ಳಿ, ಕಾಳಗಿನಕೊಪ್ಪ, ತಿಮ್ಮಾಪುರ, ಮದ್ನಳ್ಳಿ ಗ್ರಾಮ ಸೇರಿ ತಾಲೂಕಿನಲ್ಲಿಯ 46 ಶುದ್ಧ ನೀರಿನ ಘಟಕಗಳು ನಿರುಪಯುಕ್ತವಾಗಿವೆ. ಇನ್ನುಳಿದ 36 ಘಟಕಗಳಲ್ಲಿಯೂ ಕೆಲವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುವುದು ಗ್ರಾಮಸ್ಥರ ದೂರಾಗಿದೆ. ಲಕ್ಷಾಂತರ ವೆಚ್ಚದ ಈ ಘಟಕಗಳಲ್ಲಿ ಕೆಲವು ತಾಲೂಕು ಪಂಚಾಯಿತಿ ಅನುದಾನದಲ್ಲಿ ನಿರ್ವಿುಸಲ್ಪಟ್ಟಿದ್ದರೆ, ಇನ್ನು ಕೆಲವು ಜಿ.ಪಂ.ನ ನೀರು ಮತ್ತು ನೈರ್ಮಲ್ಯ ವಿಭಾಗದವರಿಂದ ನಿರ್ವಿುತವಾಗಿವೆ.
ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ತಾಪಂಗೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದೇವೆ. ಘಟಕಗಳನ್ನು ನಮಗೆ ಹಸ್ತಾಂತರಿಸಿದರೆ ಗ್ರಾಪಂಗಳ ಮೂಲಕ ಕಾಲಕಾಲಕ್ಕೆ ನಿರ್ವಹಣೆ ಮಾಡಿ ಘಟಕಗಳನ್ನು ಸರಿಯಾಗಿಟ್ಟು ಜನರಿಗೆ ಶುದ್ಧ ಕುಡಿಯುವ ನೀರು ದೊರಕುವಂತೆ ಮಾಡುತ್ತೇವೆಪರಶುರಾಮ ಘಸ್ತೆ, ಕಾರ್ಯನಿರ್ವಾಹಕ ಅಧಿಕಾರಿ, ಹಳಿಯಾಳ ತಾಪಂ