ಜಿಲ್ಲೆ

ರಾಮಾಯಣ ಪಾರಾಯಣದಿಂದ ಸಂಸ್ಕೃತಿಯ ರಕ್ಷಣೆ ಅಖಂಡ ರಾಮಾಯಣ ಪಾರಾಯಣ ಉದ್ಘಾಟಿಸಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಭಿಮತ

ಮಂಗಳೂರು: ರಾಮಾಯಣ ಪಾರಾಯಣ ರಾಮನ ಅಧ್ಯಯನವೇ ಆಗಿದೆ. ರಾಮಾಯಣ ಈ ದೇಶದ ಇತಿಹಾಸವೂ ಆಗಿದೆ. ಎಲ್ಲರೂ ರಾಮಾಯಣ ಪಾರಾಯಣ ಮಾಡುವ ಮೂಲಕ ಅದರ ಮಹತ್ವ ಅರಿತು ನಮ್ಮ ಸಂಸ್ಕೃತಿ ರಕ್ಷಣೆ ಮಾಡಬೇಕಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.


ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಲೋಕಾರ್ಪಣೆಯ ನಿಮಿತ್ತ ಮಂಗಳೂರು, ಉಡುಪಿ, ಪುತ್ತೂರು, ಕೊಡಗು, ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಸಂಸ್ಕೃತ ಭಾರತಿಯ ಮಂಗಳೂರು ವಿಭಾಗದಿಂದ ಅಖಂಡ ರಾಮಾಯಣ ಪಾರಾಯಣ ನಗರದ ಸಂಘನಿಕೇತನದಲ್ಲಿ ಶುಕ್ರವಾರ ಆರಂಭಗೊಂಡಿದ್ದು, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಅತಿಥಿಯಾಗಿದ್ದ ಸಂಸ್ಕೃತ ಭಾರತಿ ಅಖಿಲ ಭಾರತೀಯ ಸಂಘಟನಾ ಮಂತ್ರಿ ದಿನೇಶ್ ಕಾಮತ್ ಮಾತನಾಡಿ, ರಾಮ ಎಂಬ ಹೆಸರು ಇಡೀ ಭಾರತ ದೇಶವನ್ನು ಬೆಸೆದಿದೆ. ದೇಶಾದ್ಯಂತ ರಾಮನ ಹೆಸರಿನ ಜನರು ಕಾಣಸಿಗುತ್ತಾರೆ. ರಾಮಾಯಣದ ಸುಭಾಷಿತ ಓದುವುದರಿಂದ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಲು ಶಕ್ತಿ ಬರುತ್ತದೆ ಎಂದರು.


ಸಂಸ್ಕೃತ ಭಾರತಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ್ ಡಾ. ವಿಶ್ವಾಸ್ ಮಾತನಾಡಿ, ಮನೆ, ಮನೆಯಲ್ಲಿ ರಾಮಾಯಣ ಗ್ರಂಥ ಇರಬೇಕು, ರಾಮಾಯಣ ಪಾರಾಯಣ ನಡೆಯಬೇಕು ಎಂಬ ಆಶಯದೊಂದಿಗೆ ಸಂಸ್ಕೃತ ಭಾರತಿ ಕೆಲಸ ಮಾಡುತ್ತಿದೆ. ರಾಮಾಯಣ ಬೇರೆಯಲ್ಲ, ವೇದ ಬೇರೆಯಲ್ಲ. ನಮ್ಮ ಸಂಸ್ಕೃತಿಯನ್ನು ತಿಳಿದುಕೊಳ್ಳಲು ರಾಮಾಯಣ ಪಾರಾಯಣ ಮಾಡಬೇಕು. ಈ ನಿಟ್ಟಿನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಸಂಸ್ಕೃತ ಭಾರತಿ ರಾಮಾಯಣ ಪಾರಾಯಣ ಹಮ್ಮಿಕೊಂಡಿದೆ ಎಂದರು.


ಸಂಸ್ಕೃತ ಭಾರತಿ ಪ್ರಾಂತ ಸಂಪರ್ಕ ಪ್ರಮುಖ್ ಸತ್ಯನಾರಾಯಣ ಕೆ.ವಿ. ಸ್ವಾಗತಿಸಿದರು. ವಿಭಾಗ ಸಂಯೋಜಕ ನಟೇಶ ವಂದಿಸಿದರು. ಸಂಸ್ಕೃತ ಪ್ರಾಧ್ಯಾಪಕ ಡಾ. ಉಮಾಮಹೇಶ್ವರ ಕಾರ್ಯಕ್ರಮ ನಿರೂಪಿಸಿದರು.