- ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ವಿಶ್ವಾಸ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ನಗರ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಗೋಕಾಕ ಜಿಲ್ಲಾ ರಚನೆ ಆಗುವುದು ಶತಸಿದ್ಧ ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಪೂರಕವೆಂಬಂತೆ ಗೋಕಾಕ್ ರೋಡ್ ರೈಲು ನಿಲ್ದಾಣ ಪುನರಾಭಿವೃದ್ದಿಯೇ ಸಾಕ್ಷಿ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ಗೋಕಾಕ ರೋಡ್ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪುನರಾಭಿವೃದ್ಧಿಗೊಂಡಿರುವ ರೈಲ್ವೆ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಶಕಗಳಿಂದ ಬೇಡಿಕೆಯಾಗಿಯೇ ಉಳಿದುಕೊಂಡಿರುವ ಗೋಕಾಕ ಜಿಲ್ಲಾ ರಚನೆ ಆಗುವುದು ಕಾಲ ಸನ್ನಿಹಿತವಾಗಿದೆ. ಇದಕ್ಕೆ ಗೋಕಾಕ್ ರೋಡ್ ರೈಲು ನಿಲ್ದಾಣ ಕಟ್ಟಡ ಮರುನಿರ್ಮಾಣ ಮತ್ತಷ್ಟು ಬಲ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ಧಾರವಾಡ, ಬಾಗಲಕೋಟೆ, ಗದಗ, ಮುನಿರಾಬಾದ್ ಜಿಲ್ಲೆಯ ರೈಲು ನಿಲ್ದಾಣಗಳು ಈ ಭಾಗದ ಜನರಿಗೆ ಅತ್ಯಂತ ಅನುಕೂಲಕರವಾಗಿವೆ. ಬೆಳಗಾವಿ-ಬೆಂಗಳೂರು ನಡುವೆ ವಂದೇ ಭಾರತ ರೈಲು ಮಂಜೂರಾಗಿದ್ದು, ಅತಿ ಶೀಘ್ರದಲ್ಲಿ ಕಾರ್ಯಚರಣೆ ಆರಂಭಿಸಲಿದೆ. ಮುಂದಿನ ದಿನಗಳಲ್ಲಿ ಬೆಳಗಾವಿ ಮಿರಜ ನಡುವೆ ಜನ ಸಾಮಾನ್ಯರ ಪ್ರಯಾಣಕ್ಕಾಗಿ ಮೆಮೊ ರೈಲು ಸಂಚಾರ ಆರಂಭಸುವಂತೆ ರೈಲ್ವೆ ಸಚಿವರ ಮೇಲೆ ಒತ್ತಡ ಹಾಕಲಾಗುವುದು ಎಂದರು.
ಗೋಕಾಕ ರೋಡ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಹೊಸ ನಿಲ್ದಾಣದ ಕಟ್ಟಡ, ಪಾರ್ಕಿಂಗ್‌ಮತ್ತು ಸುಗಮ ವಾಹನ ಸಂಚಾರ ಪ್ರದೇಶ, ಹೊಸ ಪಾದಚಾರಿ ಸೇತುವೆ, ನವೀಕರಿಸಿದ ಶೌಚಾಲಯಗಳು, ಲಿಫ್ಟ್ ಗಳು, ವಿಶಾಲವಾದ ಕಾಯುವ ಕೋಣೆ, ಬೆಳಕು ಮತ್ತು ಡಿಜಿಟಲ್ ಮಾಹಿತಿ ವ್ಯವಸ್ಥೆ ಟಿಕೆಟ್ ಕೌಂಟರ್‌ಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳನ್ನು ನೀಡಲಾಗಿದೆ. ಈ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ಕೇಂದ್ರ ರೇಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದರು.
ಮಾಜಿ ಸಚಿವ ಆರ. ಎಂ. ಪಾಟೀಲ, ನೈರುತ್ಯ ರೈಲ್ವೆ ವಲಯದ ಮುಖ್ಯ ಕಮರ್ಷಿಯಲ್ ಮ್ಯಾನೇಜರ ಡಾ. ಅನೂಫ ಸಾಧು, ಡಿ.ಆರ್.ಯು.ಸಿ.ಸಿ ಸದಸ್ಯ ಫಕೀರಗೌಡ ಸಿದ್ದನಗೌಡರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ರಾಮಣ್ಣ ಹುಕ್ಕೇರಿ, ರಾಜು ಕತ್ತಿ, ಸುರೇಶ ಪಾಟೀಲ, ಮಾರುತಿ ವಿಜಯನಗರ, ಮಹ್ಮದ ಗೌಸ ಬಾಗೇವಾಡಿ, ಹಿರಿಯ ವಿಭಾಗೀಯ ಸುರಕ್ಷಾ ನೀರಿಕ್ಷಕ ಡಾ. ಕಾರ್ತಿಕ, ಬೆಳಗಾವಿ ವಿಭಾಗದ ಕಮರ್ಷಿಯಲ್ ಮ್ಯಾನೇಜರ ಭೀಮಪ್ಪ ಮೇದಾರ, ರವೀಂದ್ರ ಮಾದರ, ಅಮರ ಬಡೋದೆ ಇತರರಿದ್ದರು.