ಬೆಳಗಾವಿ ನಗರದ ರಾಜಾ ಲಖಮಗೌಡ ವಿಜ್ಞಾನ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಜಾನಪದ ಜಾತ್ರೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ಆಹಾರ ಪದಾರ್ಥಗಳನ್ನು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ, ಡಾ. ಪ್ರಭಾಕರ ಕೋರೆ ವೀಕ್ಷಿಸಿದರು. 
ಜಿಲ್ಲೆ

ಆರ್‌ಎಲ್‌ಎಸ್ ಕಾಲೇಜಿನಲ್ಲಿ ಜನಪದ ಜಾತ್ರೆ

Belagavi

ಬೆಳಗಾವಿ: ಬಣ್ಣ ಬಣ್ಣದ ಸೀರೆಗಳನ್ನುಟ್ಟು ಬಂದಿದ್ದ ನಾರಿಯರು... ಚಕ್ಕಡಿಯೊಂದಿಗೆ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದ ರೈತರು, ಬಗೆ ಬಗೆಯ ಆಹಾರ ಪದಾರ್ಥಗಳು..!

ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಕಾಲೇಜು ಆವರಣದಲ್ಲಿ ಶುಕ್ರವಾರ ಕಂಡುಬಂದ ದೃಶ್ಯಗಳಿವು. ಕಾಲೇಜಿನಲ್ಲಿ ಶುಕ್ರವಾರ ಜನಪದ ಜಾತ್ರೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳಾದ ಸೀರೆ, ಲಂಗ-ದಾವಣಿಗಳಲ್ಲಿ ಮಿಂಚಿದರು. ರೇಷ್ಮೆ, ಇಳಕಲ್ ಸೀರೆ ಉಟ್ಟು, ಮೈತುಂಬ ಚಿನ್ನಾಭರಣ ತೊಟ್ಟು ಮಿಂಚಿದರು. ಯುವಕರು ತಲೆಗೆ ಪೇಟ ಹಾಗೂ ಧೋತರ ಉಟ್ಟು ಗಮನ ಸೆಳೆದರು. ಎಲ್ಲ ವಿದ್ಯಾರ್ಥಿಗಳು ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದರು. ನಾಡಿನ ಬಗೆಬಗೆಯ ತಿಂಡಿ, ತಿನಿಸುಗಳೊಂದಿಗೆ ವಿದ್ಯಾರ್ಥಿನಿಯರು ಆಗಮಿಸಿದ್ದರು. ಪ್ರಾಧ್ಯಾಪಕರು ಪಂಚೆ, ಉಟ್ಟು, ಖಡಕ್ ರೊಟ್ಟಿ, ಗೋಧಿ ಹುಗ್ಗಿ ಸವಿದು ಸಂಭ್ರಮಿಸಿದರು. ವಿದ್ಯಾರ್ಥಿನಿಯರು ಉತ್ತರ ಕರ್ನಾಟಕದ ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಎಣ್ಣೆಗಾಯಿ, ಮೊಸರನ್ನ ತಂದಿದ್ದರು.

ಜನಪದ ಜಾತ್ರೆ ಉದ್ಘಾಟಿಸಿದ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ನಮ್ಮ ಕರ್ನಾಟಕದ ಸಂಸ್ಕೃತಿ, ಪರಂಪರೆ ಶ್ರೇಷ್ಠವಾಗಿದೆ. ನಾಡಿನ ಪ್ರತಿ ಜಿಲ್ಲೆಯಲ್ಲೂ ವೇಷ, ಭಾಷೆಗಳು ಭಿನ್ನವಾಗಿವೆ. ನಮ್ಮಲ್ಲಿಯ ಆಚಾರ-ವಿಚಾರಗಳು ಹಾಗೂ ಶ್ರೀಮಂತ ಸಂಸ್ಕೃತಿ ಜಗತ್ತಿನ ಬೇರೆ ಯಾವ ರಾಷ್ಟ್ರದಲ್ಲೂ ಇಲ್ಲ ಎಂದರು. ಬದಲಾದ ಜೀವನ ಶೈಲಿಯಲ್ಲಿ ನಾವು ನಾಡಿನ ಸಂಸ್ಕೃತಿ, ಪರಂಪರೆ ಮರೆಯುತ್ತಿದ್ದೇವೆ. ಕಾಲ ಹೇಗೇ ಬದಲಾದರೂ ನಮ್ಮ ಉದಾತ್ತ ಸಂಸ್ಕೃತಿ-ಸಂಪ್ರದಾಯ ಬಿಡಬಾರದು. ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕೃತಿ ಪರಿಚಯ ಮಾಡಿಕೊಡುವ ಉದ್ದೇಶದಿಂದ ನಾಲ್ಕು ವರ್ಷಗಳಿಂದ ಆರ್‌ಎಲ್‌ಎಸ್ ಕಾಲೇಜಿನಲ್ಲಿ ಜನಪದ ಜಾತ್ರೆ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.