ಗಂಗೊಳ್ಳಿ: ಕುಂದಾಪುರ ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ನೆರೆ ಸೃಷ್ಟಿಯಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಪಾಯದಲ್ಲಿರುವ ನದಿ ತೀರದ ಮನೆಗಳು: ಅಪಾರ ಗಾಳಿ, ಮಳೆಗೆ ಸೌಪರ್ಣಿಕಾ, ಎಡಮಾವಿನಹೊಳೆ ನದಿಪಾತ್ರದ ಹಳಗೇರಿಯ ಕಂಬಳಗದ್ದೆ, ನಾವುಂದ ಗ್ರಾಮದ ಸಾಲ್ಬುಡ, ಬಡಾಕೆರೆ, ಪಡುಕೋಣೆ, ಚಿಕ್ಕಳ್ಳಿ ಸಹಿತ ಬಹುತೇಕ ಎಲ್ಲ ಗ್ರಾಮಗಳಲ್ಲಿ ನೆರೆ ಕಾಣಿಸಿಕೊಂಡಿದೆ. ನೆರೆ ನೀರು ಹೆಚ್ಚಿದ ಪರಿಣಾಮ ವಾಸ್ತವ್ಯದ ಮನೆಗಳಿಗೆ ನೀರು ನುಗಿದ್ದು, ಮನೆ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹಳಗೇರಿ ಗ್ರಾಮದಲ್ಲಿ ಒಂದೇ ಸಮನೆ ಎಡಮಾವಿನ ಹೊಳೆ ಉಕ್ಕಿ ಹರಿದ ಪರಿಣಾಮ ಈ ಭಾಗದ ಸುಮಾರು 8ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತಗೊಂಡಿತು. ಸಂಪರ್ಕ ರಸ್ತೆ ಹಾಗೂ ಕಾಲುಸಂಕ ಮುಳುಗಡೆಯಾಗಿದೆ. ಗ್ರಾಮಗಳ ಸಂಪರ್ಕ ಕಡಿತ: ಸೌಪರ್ಣಿಕಾ, ವಾರಾಹಿ, ಕುಬ್ಜಾ, ಎಡಮಾವಿನ ಹೊಳೆ ಮೊದಲಾದ ನದಿಗಳು ಮೈದುಂಬಿ ಹರಿಯುತ್ತಿವೆ. ಸೌಪರ್ಣಿಕಾ ನದಿ ಪಾತ್ರದ ನಾವುಂದ, ಮರವಂತೆ, ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮದ ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ವಾಸ್ತವ್ಯದ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಮರವಂತೆ- ನಾಡ, ನಾವುಂದ- ಬಡಾಕೆರೆ, ನಾವುಂದ- ಸಾಲ್ಬುಡ ಸಂಪರ್ಕ ರಸ್ತೆಗಳಲ್ಲಿ ಸೌಪರ್ಣಿಕಾ ನದಿ ನೀರು ಉಕ್ಕಿ ಹರಿಯುತ್ತಿದ್ದು, ಈ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸೌಪರ್ಣಿಕಾ ನದಿ ನೀರು ಪುರಾಣ ಪ್ರಸಿದ್ಧ ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನದವರೆಗೂ ಹರಿಯುತ್ತಿದೆ. ಕೃಷಿ ಭೂಮಿಗಳು ಸಂಪೂರ್ಣ ಜಲಾವೃತಗೊಂಡಿದ್ದು, ನಾಟಿ ಮಾಡಲು ಸಿದ್ಧಪಡಿಸಿದ ನೇಜಿ, ಭತ್ತದ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ತೆಂಗಿನ ತೋಟಗಳಲ್ಲಿ ನೀರು ತುಂಬಿದೆ. ಪಂಚಗಂಗಾವಳಿ ನದಿ ನೀರಿನ ಮಟ್ಟವೂ ಏರಿಕೆಯಾಗಿದ್ದು, ಉಕ್ಕಿ ಹರಿಯಲಾರಂಭಿಸಿದೆ. ಅಪಾರ ಹಾನಿ: ಗಂಗೊಳ್ಳಿ, ಗುಜ್ಜಾಡಿ ಮತ್ತು ಹೊಸಾಡು ಗ್ರಾಮದ ಅನೇಕ ಕಡೆ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಭಾರಿ ಗಾಳಿಗೆ ಅನೇಕ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ತಂತಿಗಳು ಮುರಿದು ಬಿದ್ದು, ವಿದ್ಯುತ್ ಸಂಚಾರ ಕಡಿತಗೊಂಡಿದೆ. ಪ್ರಕ್ಷುಬ್ಧಗೊಂಡ ಕಡಲು: ಮಳೆ, ಗಾಳಿಯಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು, ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ 66ರ ತಡೆಗೋಡೆಗೆ ಬೃಹದಾಕಾರದ ಅಲೆಗಳು ಅಪ್ಪಳಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿಗೆ ನೀರು ಚಿಮ್ಮುತ್ತಿದೆ. ಗಂಗೊಳ್ಳಿಯ ಬೇಲಿಕೇರಿ, ಖಾರ್ವಿಕೇರಿ, ಗುಜ್ಜಾಡಿ ಗ್ರಾಮದ ಬೆಣ್ಗೆರೆ, ತ್ರಾಸಿ, ಹೊಸಾಡು ಗ್ರಾಮದ ಕಂಚುಗೋಡು ಮತ್ತು ಮರವಂತೆಯಲ್ಲಿ ಕಡಲ್ಕೊರೆತದ ತೀವ್ರತೆ ಹೆಚ್ಚಾಗಿದ್ದು, ಕಡಲ ತೀರದ ಜನರಲ್ಲಿ ಆತಂಕ ಹೆಚ್ಚಿಸಿದೆ. ಜನಪ್ರತಿನಿಧಿಗಳಿಗೆ ತರಾಟೆ: ಚುನಾವಣೆ ಬಂದಾಗ ಭರವಸೆಗಳ ಸುರಿಮಳೆ ನೀಡುವ ಜನಪ್ರತಿನಿಧಿಗಳು ನಂತರ ಈಕಡೆ ಸುಳಿಯುವುದೇ ಇಲ್ಲ. ಪ್ರತಿವರ್ಷ ಮಳೆಗಾಲದಲ್ಲಿ ನೆರೆ ಹಾವಳಿ ಕಾಣಿಸಿಕೊಂಡು ಜನರಿಗೆ ತೊಂದರೆಯಾಗುತ್ತಿದ್ದರೂ ಸಮಸ್ಯೆ ಬಗ್ಗೆ ಯಾರು ಗಮನಹರಿಸುತ್ತಿಲ್ಲ ಎಂದು ಹಳಗೇರಿ ಗ್ರಾಮಸ್ಥರು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಳಗೇರಿ ಪ್ರದೇಶದಲ್ಲಿ ನೆರೆ ನೀರಿನಲ್ಲಿ ಸಿಕ್ಕಿಹಾಕಿಕೊಂಡಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ತಂದಿದ್ದ ದೋಣಿಯ ಇಂಜಿನ್ ಕೈಕೊಟ್ಟಿತ್ತು. ದರಿಂದ ಜನರನ್ನು ಸ್ಥಳಾಂತರಿಸಲು ಕಷ್ಟವಾಯಿತು. ಆದರೆ ಅಪಾಯವನ್ನೂ ಲೆಕ್ಕಿಸದೆ ಇಂಜಿನ್ ಇಲ್ಲದ ದೋಣಿಯನ್ನೇ ಹೋಗಿ ಅಪಾಯದಲ್ಲಿದ್ದ ಜನರನ್ನು ಸ್ಥಳಾಂತರಿಸಲಾಯಿತು. ಇಂಥ ತುರ್ತು ಸಂದರ್ಭದಲ್ಲಿ ದೋಣಿಯನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳದ ಅಗ್ನಿಶಾಮಕ ದಳದ ಅಧಿಕಾರಿಗಳ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರಾದ ಮಾಧವ ಖಾರ್ವಿ, ಸಂಜೀವ ಖಾರ್ವಿ, ನಾಗೇಂದ್ರ ಗಾಣಿಗ ಅವರು ಅಪಾಯದಲ್ಲಿ ಸಿಲುಕ್ಕಿದ್ದವರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿ ಮಾನವೀಯತೆ ಮರೆದರು.
ಬೈಂದೂರು ಕ್ಷೇತ್ರದ ಬೇರೆ ಬೇರೆ ಕಡೆಗಳಲ್ಲಿ ವಿಪರೀತ ನೆರೆ ಹಾವಳಿ ಕಾಣಿಸಿಕೊಂಡು ಮನೆಗಗಳಿಗೆ ನೀರು ನುಗ್ಗಿ ಜನರನ್ನು ಸ್ಥಳಾಂತರಿಸಬೇಕಾದ ಪರಿಸ್ಥಿತಿ ಬಂದಿದೆ. ಅಪಾಯದ ಸಂದರ್ಭದಲ್ಲಿ ಬೇರೆ ಬೇರೆ ಕಡೆಗಳಲ್ಲಿನ ಮೀನುಗಾರರು ದೋಣಿ ಮತ್ತು ಇಂಜಿನ್‌ಗಳನ್ನು ಒದಗಿಸಿದ್ದಾರೆ. ಜಿಲ್ಲಾಡಳಿತ ಸಹಾಯ ಮಾಡುತ್ತಿದೆ. ತಕ್ಷಣಕ್ಕೆ ನೆರೆಪೀಡಿತ ಜನರನ್ನು ಸ್ಥಳಾಂತರಿಸುವುದು ಮತ್ತು ಗಂಜಿ ಕೇಂದ್ರಗಳನ್ನು ತೆರೆಯುವ ಕಾರ್ಯ ನಡೆಯುತ್ತಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿದ್ದೇವೆ. - ಗುರುರಾಜ್ ಗಂಟಿಹೊಳೆ, ಶಾಸಕರು, ಬೈಂದೂರು https://www.vijayavani.net/shila-muhurta-for-the-renovation-of-haladi-marikanu-temple https://www.vijayavani.net/heavy-rain-artificial-flooding-in-byndoor-taluk