ಜಿಲ್ಲೆ

ತುಂಗಭದ್ರಾ ನದಿ ಪಾತ್ರದಲ್ಲಿ ಎದುರಾಯ್ತು ಪ್ರವಾಹ ಭೀತಿ

ಹರ್ಷ ನ.ಪುರೋಹಿತ

ಹೊನ್ನಾಳಿ: ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಹಾಗೂ ಹೊನ್ನಾಳಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಕಾರಣ ಹೊನ್ನಾಳಿ ಪಟ್ಟಣ ಸೇರಿ ತುಂಗಭದ್ರಾ ನದಿಪಾತ್ರದಲ್ಲಿ ನೀರು 12.056 ಮೀಟರ್ ಹೆಚ್ಚಳವಾಗಿ ಪ್ರವಾಹ ಭೀತಿ ಎದುರಾಗಿದೆ.

ತಾಲೂಕಿನ ಮರಿಗೊಂಡನಹಳ್ಳಿ, ಕೋಟೆಹಾಳ್ ಹಾಗೂ ಕುಳಗಟ್ಟೆ ಗ್ರಾಮದ ಸುಮಾರು 100 ಹೆಕ್ಟೇರ್ ಪ್ರದೇಶಕ್ಕೆ ನೀರು ನುಗ್ಗಿದೆ. ಜತೆಗೆ, ನದಿಪಾತ್ರದ ಅಡಕೆ ತೋಟಗಳು ಸಂಪೂರ್ಣ ಜಲಾವೃತವಾಗಿವೆ.

ಗಂಟೆಗಂಟೆಗೂ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಬಾಲರಾಜ್‌ಘಾಟ್‌ನ 16, ಬಂಬೂ ಬಜಾರ್‌ನ 4 ಸೇರಿ ಒಟ್ಟು 20 ಕುಟುಂಬದ 96 ಜನರನ್ನು ಪಟ್ಟಣದ ಅಂಬೇಡ್ಕರ್ ಭವನ, ಗುರುಭವನದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಸಮೀಪದ ವಿಶ್ವೇಶ್ವರಯ್ಯ ಖಾಸಗಿ ಶಾಲೆ ಆವರಣ ಜಲಾವೃತವಾಗಿದ್ದರಿಂದ ಶಾಲೆಗೆ ರಜೆ ಘೋಷಿಸಲಾಗಿದೆ.

ನೆರೆಹಾವಳಿ ಹಿನ್ನ್ನೆಲೆಯಲ್ಲಿ ಹೊನ್ನಾಳಿ ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಅಧಿಕಾರಿಗಳಿಗೆ ಸಂಬಂಧಪಟ್ಟ ಜವಾಬ್ದಾರಿ ಹಂಚಿದ್ದಾರೆ. ನದಿ ಬಳಿ ಯಾರೂ ಸುಳಿಯದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು. ಬೆಸ್ಕಾಂನವರು ನೀರಿನಲ್ಲಿರುವ ವಿದ್ಯುತ್ ಕಂಬಗಳಿಂದ ಯಾವುದೇ ಅಪಾಯ ಆಗದಂತೆ ನಿಗಾ ವಹಿಸಬೇಕು. ಮಳೆಯಿಂದ ರಸ್ತೆಗಳು ಹಾಳಾಗಿದ್ದರೆ ಅನ್ಯ ಮಾರ್ಗಗಳಲ್ಲಿ ಸಂಚರಿಸುವ ನಾಮಫಲಕ ಅಳವಡಿಸುವಂತೆ ಸೂಚಿಸಿದ್ದಾರೆ.

ನೀರು ಭರ್ತಿಯಾಗಿರುವುದರಿಂದ ತುಂಗಭದ್ರಾ ನದಿ ಸೇತುವೆ ಬಳಿ ಸಾರ್ವಜನಿಕರು ಸೆಲ್ಫಿ ಫೋಟೋ ತೆಗೆದುಕೊಳ್ಳುವ ದೃಶ್ಯ ಕಂಡು ಬಂತು.