ಜಿಲ್ಲೆ

ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ನೀರು

ವಿವೇಕಾನಂದ ದಾಸನಕೊಪ್ಪ

ಮುಂಡರಗಿ: ತಾಲೂಕಿನ ಗಂಗಾಪುರ, ಕೊರ್ಲಹಳ್ಳಿ, ಶೀರನಹಳ್ಳಿ ಭಾಗದ ತುಂಗಭದ್ರಾ ನದಿ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದ್ದು, ಇದರಿಂದ ನದಿ ನೀರು ಬಳಸುವ ಜನರಲ್ಲಿ ಆತಂಕ ಮೂಡಿಸಿದೆ.

ಈ ಭಾಗದಲ್ಲಿ ಕೃಷಿಗೆ ನದಿ ನೀರು ಬಳಸಲಾಗುತ್ತದೆ. ಕೆಲವೆಡೆ ನದಿ ಮಧ್ಯಭಾಗದಲ್ಲಿರುವ ನೀರು ಅಷ್ಟೊಂದು ಹಸಿರು ಕಾಣದಿದ್ದರೂ ದಡದಲ್ಲಿ ನೀರು ಪಾಚಿಗೊಂಡು ಹಚ್ಚ ಹಸಿರಿನಿಂದ ಕಾಣುತ್ತಿದೆ. ಸಿಂಗಟಾಲೂರು ಬ್ಯಾರೇಜ್​ನಿಂದ ನದಿಗೆ ನೀರು ಹರಿಸುವುದನ್ನು ಸಂಪೂರ್ಣ ನಿಲ್ಲಿಸಲಾಗಿದೆ. ನದಿಯಲ್ಲಿ ನೀರು ಹರಿಯುವಾಗ ಹಸಿರು ಬಣ್ಣದ ನೀರು ಕಾಣುವುದಿಲ್ಲ. ಹರಿವು ನಿಂತಾಗ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದೆ.

ನದಿಯಿಂದ ಪಂಪ್​ಸೆಟ್​ಗಳ ಮೂಲಕ ಜಮೀನಿಗೆ ಹರಿದು ಬರುವ ನೀರು ಹಸಿರಾಗಿದೆ. ಇದರಿಂದ ಭತ್ತದ ಸಸಿಗಳು ನಾಶವಾಗುವ ಹಾಗೂ ಇತರ ಬೆಳೆ ಹಾನಿಯಾಗುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ. ಪಶುಗಳಿಗೆ ನದಿ ನೀರು ಕುಡಿಸುವುದರಿಂದ ಅನಾರೋಗ್ಯ ಕಾಡುವ ಭಯ ಮನೆ ಮಾಡಿದೆ. ಇನ್ನೂ ಜಲಚರಗಳಿಗೆ ತೊಂದರೆಯಾಗುವ ಸಂಭವ ಹೆಚ್ಚಿದೆ. ಬೇಸಿಗೆ ಆರಂಭಕ್ಕೂ ಪೂರ್ವದಲ್ಲಿಯೇ ನೀರು ಹಸಿರು ಪಾಚಿಯಂತೆ ಕೂಡಿದ್ದು ಚಿಂತೆಗೀಡು ಮಾಡಿದೆ.

ಸಿಂಗಟಾಲೂರು ಬ್ಯಾರೇಜ್ ಕೆಳಗಡೆಯ ಈ ಭಾಗದಲ್ಲಿ ನೀರು ಹಸಿರಾಗಿ ಕಾಣುತ್ತಿದೆ. ಬ್ಯಾರೇಜ್​ನ ಹಿನ್ನೀರು ಭಾಗದಲ್ಲಿ ಮಾತ್ರ ಹಸಿರು ಆಗಿಲ್ಲ. ಆದ್ದರಿಂದ ಈ ಭಾಗದ ನೀರನ್ನು ಪರೀಕ್ಷಿಸಬೇಕು ಎಂದು ಕೊರ್ಲಹಳ್ಳಿ ಗ್ರಾಮದ ತಿಪ್ಪೇಶ ಮಡಿವಾಳರ ಒತ್ತಾಯಿಸಿದ್ದಾರೆ.

ಪರೀಕ್ಷಿಸಿ ಬಳಸುವುದು ಒಳಿತು: ಹಸಿರು ಬಣ್ಣಕ್ಕೆ ತಿರುಗಿದ ನೀರನ್ನು ನೇರವಾಗಿ ಕುಡಿಯಬಾರದು. ನೇರವಾಗಿ ಕುಡಿಯುವುದರಿಂದ ವಾಂತಿ, ಭೇದಿ, ನೆಗಡಿ, ಕೆಮ್ಮು ರೋಗಕ್ಕೆ ತುತ್ತಾಗಬೇಕಾಗುತ್ತದೆ. ಇಂತಹ ನೀರನ್ನು ಸರಿಯಾಗಿ ಶುದ್ಧೀಕರಿಸಿ ಅದು ಕುಡಿಯುವುದಕ್ಕೆ ಯೋಗ್ಯವಿದೆ ಎಂದಾಗ ಮಾತ್ರ ಕುಡಿಯಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮಣ ಪೂಜಾರ ತಿಳಿಸಿದರು.

ನದಿ ಹರಿವು ಇದ್ದಾಗ ಈ ರೀತಿಯ ಹಸಿರು ಬಣ್ಣ ಇರುವುದಿಲ್ಲ. ಹರಿವು ಸಂಪೂರ್ಣ ನಿಂತಾಗ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಪಂಪ್​ಸೆಟ್​ನಲ್ಲೂ ಹಸಿರು ನೀರು ಬರುತ್ತಿದೆ. ನೀರನ್ನು ಪಶುಗಳಿಗೆ ಕುಡಿಸುವುದರಿಂದ ರೋಗಕ್ಕೆ ತುತ್ತಾಗುತ್ತದೆ. ಅನೇಕ ಜನರು ಸಹ ನೀರು ಕುಡಿಯುತ್ತಾರೆ. ನೀರನ್ನು ಪರೀಕ್ಷಿಸಿ ಜನರ ಆತಂಕವನ್ನು ದೂರ ಮಾಡಬೇಕು. | ನಿಂಗಪ್ಪ ಹುಳ್ಳಿ, ಶೀರನಹಳ್ಳಿ ರೈತ ತುಂಗಭದ್ರಾ ನದಿ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿರುವ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ನೀರಾವರಿ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಎಇಇಗಳಿಗೆ ಸೂಚಿಸಿದ್ದೇನೆ. ಅವರು ಪರಿಶೀಲಿಸಿದ್ದು, ನೀರಿನ ವರದಿ ಪಡೆದು ಮುಂದಿನ ಕ್ರಮ ವಹಿಸಲಾಗುವುದು. ಹಸಿರು ಬಣ್ಣಕ್ಕೆ ತಿರುಗಿದ ನೀರನ್ನು ಜನರು ಮತ್ತು ಜಾನುವಾರುಗಳು ಕುಡಿಯಬಾರದು. | ಎರ್ರಿಸ್ವಾಮಿ ಪಿ.ಎಸ್, ತಹಸೀಲ್ದಾರ್ ಮುಂಡರಗಿ