ಜಿಲ್ಲೆ

ಪುಟಾಣಿ ರಿತನ್ಯಾ 'ಸೂಪರ್​ ಟ್ಯಾಲೆಂಟೆಡ್​ ಕಿಡ್​'!!

ಪ್ರಶಾಂತ ಜಿ. ಭಾಗ್ವತ

ಇಂಟರ್​ನ್ಯಾಷನಲ್​ ಬುಕ್​ ಆಫ್​ ರೆಕಾರ್ಡ್ಸ್​ ಪ್ರಶಸ್ತಿ

'ಒನ್​ ಇನ್​ ಎ ಮಿಲಿಯನ್​' ಗೌರವದೊಂದಿಗೆ ಪದಕ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲೆಯ ಕಮಲಶಿಲೆ ಗ್ರಾಮದ ನಿವಾಸಿ ಸುಧಾಕರ ಆಚಾರ್ಯ ಹಾಗೂ ಸುಚೇತಾ ದಂಪತಿಯ ಪುತ್ರಿ ರಿತನ್ಯಾ ಎಸ್​. ಆಚಾರ್ಯ (1 ವರ್ಷ 4 ತಿಂಗಳು), ತನ ಪ್ರತಿಭೆಯಿಂದ ಇಂಟರ್​ನ್ಯಾಷನಲ್​ ಬುಕ್​ ಆಫ್​ ರೆಕಾರ್ಡ್ಸ್​ ವತಿಯಿಂದ ಸೂಪರ್​ ಟ್ಯಾಲೆಂಟೆಡ್​ ಕಿಡ್​ ಪ್ರಶಸ್ತಿ ಗಳಿಸಿದ್ದಾಳೆ. ಅಲ್ಲದೆ, ಒನ್​ ಇನ್​ ಎ ಮಿಲಿಯನ್​ ಗೌರವಕ್ಕೂ ಪಾತ್ರಳಾಗಿ ಪದಕ ಗಿಟ್ಟಿಸಿದ್ದಾಳೆ.

ಪುಟಾಣಿ ರಿತನ್ಯಾ ಇಷ್ಟು ಚಿಕ್ಕ ವಯಸ್ಸಿನಲ್ಲಿ 21 ಪಕ್ಷಿ, 28 ಪ್ರಾಣಿ, ದೇಹದ 15 ಭಾಗ, 20 ಹಣ್ಣು, 10 ಜಲಚರ ಪ್ರಾಣಿ, 6 ಕೀಟ, 23 ತರಕಾರಿ, 65ಕ್ಕೂ ಹೆಚ್ಚು ಗೃಹೋಪಯೋಗಿ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯ ತೋರಿದ್ದಾಳೆ.

ಅದಲ್ಲದೆ, 30 ವಸ್ತುಗಳನ್ನು ಹುಡುಕಿ ತರುವುದು, ಹೇಳಿದ ಆಜ್ಞೆಗಳನ್ನು ಪಾಲಿಸಿ ಮಾಡುವುದು, 8ಕ್ಕೂ ಹೆಚ್ಚು ಸಾಕುಪ್ರಾಣಿಗಳ ಧ್ವನಿಯನ್ನು ಅನುಕರಿಸುತ್ತಾಳೆ. ಕೇವಲ 2 ನಿಮಿಷ 40 ಸೆಕೆಂಡ್​ಗಳಲ್ಲಿ 35 ಮೆಟ್ಟಿಲುಗಳನ್ನು ಯಾರ ಸಹಾಯವಿಲ್ಲದೆ ಏರುವ ಮೂಲಕ ವಯಸ್ಸಿಗೆ ಮೀರಿದ ಪ್ರತಿಭೆ ತೋರ್ಪಡಿಸಿದ್ದಾಳೆ. ಅವಳ ಈ ಸಾಧನೆ ಗಮನ ಸೆಳೆದಿದ್ದು, ಪಾಲಕರಿಗೂ ಸಂತಸ ತಂದಿದೆ.