| ನವೀನ ಎಂ.ಬಿ., ದಾವಣಗೆರೆ
ಕರೊನಾ ಮೂರನೇ ಅಲೆಯ ಆತಂಕದ ನಡುವೆಯೇ ಚಿಣ್ಣರನ್ನೇ ಗುರಿಯಾಗಿಸಿಕೊಂಡು ಆರ್ಭಟಿಸುತ್ತಿರುವ ವೈರಾಣು ಜ್ವರದ ಹಾವಳಿಗೆ ದಾವಣಗೆರೆ ಸೇರಿ ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳು ತತ್ತರಿಸಿವೆ. ಕಳೆದೊಂದು ತಿಂಗಳ ಅವಧಿಯಲ್ಲಿ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಕ್ಕಳು ಜ್ವರಪೀಡಿತರಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಬೆಡ್ ಕೊರತೆ: 15 ದಿನಗಳಿಂದೀಚೆಗೆ ವೈರಾಣು ಅಬ್ಬರ ಇನ್ನಷ್ಟು ಹೆಚ್ಚಿದ್ದು ದಿನವೊಂದಕ್ಕೆ 2500 ಮಕ್ಕಳು ಚಿಕಿತ್ಸೆ ಬಯಸಿ ದಾವಣಗೆರೆಯ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದು ಬೆಡ್ಗಳ ಕೊರತೆ ಎದುರಾಗಿದೆ. ಈ ಪೈಕಿ ಶೇ.10 ಅಂದರೆ 250 ಪುಟಾಣಿಗಳು ಒಳ ರೋಗಿಗಳಾಗಿ ಚಿಕಿತ್ಸೆ ಪಡೆದರೆ, ದಿನಕ್ಕೆ 25 ಮಕ್ಕಳು ಐಸಿಯುಗೆ ದಾಖಲಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಜೂನ್, ಜುಲೈ, ಆಗಸ್ಟ್ ಜ್ವರದ ವಾಡಿಕೆ ಅವಧಿಯಾಗಿದ್ದರೂ, ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಮಕ್ಕಳ ವೈದ್ಯರೇ ಹೇಳುವ ಪ್ರಕಾರ ಈ ಬಾರಿ ಕಾಯಿಲೆಯ ತೀವ್ರತೆ ಅಧಿಕವಾಗಿದೆ.
ಒಟ್ಟಿಗೆ ದಾಳಿ: ಆರ್.ಎಸ್.ವಿ (ರೆಸ್ಪಿರೇಟರಿ ಸಿನ್ಸಿಶಿಯಲ್ ವೈರಸ್) ಎಂಬ ವೈರಾಣು ಹೊತ್ತು ತರುವ ಬ್ರಾಂಕ್ಯುಲೈಟಿಸ್, ವೈರಲ್ ವ್ಹೀಜಿಂಗ್, ವೈರಲ್ ನ್ಯುಮೋನಿಯಾ ಏಕಕಾಲಕ್ಕೆ ದಾಳಿ ಮಾಡುತ್ತಿದೆ. ಇದರೊಟ್ಟಿಗೆ ಡೆಂಘೆ ಕೂಡ ಸೇರಿರುವುದು ಆತಂಕ ಸೃಷ್ಟಿಸಿದೆ.
ಲಕ್ಷಣಗಳು: ತೀವ್ರ ಜ್ವರ, ಶೀತ, ಕೆಮ್ಮು, ತಲೆನೋವು, ಮೈ ಕೈ ನೋವು, ಮುಖ ಕೆಂಪಾಗುವಿಕೆ, ಮೈ ಮೇಲೆ ಗುಳ್ಳೆಗಳು
ದಾವಣಗೆರೆಯಲ್ಲಿ ಆತಂಕ: ಮೂರು ದಿನಗಳಿಂದ ದಾವಣಗೆರೆ ಎಸ್.ಎಸ್.ವೈದ್ಯಕೀಯ ವಿದ್ಯಾಲಯದ ಐಸಿಯುನಲ್ಲಿ 65 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈರಲ್ ಫೀವರ್ ಸಾಮಾನ್ಯವಾಗಿ 3-5 ದಿನದಲ್ಲಿ ವಾಸಿಯಾಗುತ್ತದೆ. ಈ ಜ್ವರ 5-8 ದಿನದವರೆಗೆ ಇರುತ್ತದೆ. ಹೀಗಾಗಿ ಪಾಲಕರು ಎರಡೆರಡು ಬಾರಿ ಆಸ್ಪತ್ರೆಗೆ ಓಡಾಡುತ್ತಿದ್ದಾರೆ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹರಪನಳ್ಳಿ, ರಾಣೆಬೆನ್ನೂರು, ಹಿರೇಕೆರೂರು, ಹಾವೇರಿ ಭಾಗದಿಂದ ಇಲ್ಲಿಗೆ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್ ಪ್ರಕಾರ ದಾವಣಗೆರೆಯ ಎಸ್.ಎಸ್. ವೈದ್ಯಕೀಯ ವಿದ್ಯಾಲಯದಲ್ಲಿ 116, ಬಾಪೂಜಿಯಲ್ಲಿ 97, ಜಿಲ್ಲಾಸ್ಪತ್ರೆಯಲ್ಲಿ 23 ಸೇರಿ ಒಟ್ಟು 236 ಮಕ್ಕಳು ಚಿಕಿತ್ಸೆಗೆ ದಾಖಲಾಗಿದ್ದಾರೆ. ಇದು ಮೂರು ಆಸ್ಪತ್ರೆಗಳ ಲೆಕ್ಕ. ನಗರವೊಂದರಲ್ಲೇ 30 ನರ್ಸಿಂಗ್ ಹೋಮ್ಳಿವೆ. 68ಕ್ಕೂ ಹೆಚ್ಚು ಮಕ್ಕಳ ವೈದ್ಯರಿದ್ದಾರೆ. ಅಲ್ಲಿಗೆ ಚಿಕಿತ್ಸೆಗೆ ತೆರಳಿದವರ ಅಂಕಿ-ಅಂಶ ಗಣನೆಗೆ ತೆಗೆದುಕೊಂಡರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಚಿತ್ರದುರ್ಗದಲ್ಲಿ ಜ್ವರದಿಂದ 215 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದರೆ ಜಿಲ್ಲೆಯ ವಿವಿಧೆಡೆ 500ಕ್ಕೂ ಅಧಿಕ ಪುಟಾಣಿಗಳು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ದೃಢಪಡಿಸಿವೆ.
ಕರೊನಾ ನಂತರ ಕಳೆದ ಒಂದೂವರೆ ತಿಂಗಳಿಂದ ಮಕ್ಕಳಿಗೆ ವೈರಲ್ ಫೀವರ್ ಬಾಧಿಸುತ್ತಿದೆ. 1ತಿಂಗಳಿನಿಂದ- ಮೂರು ವರ್ಷದ ಮಕ್ಕಳಲ್ಲಿ ಉಸಿರಾಟ ಸಮಸ್ಯೆ, ಕೆಮ್ಮು, ಶೀತ ಕಂಡು ಬರುತ್ತಿದೆ. ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು. | ಡಾ. ಬಾಣಾಪುರಮಠ ಮಕ್ಕಳ ತಜ್ಞರು, ದಾವಣಗೆರೆ ಕೋವಿಡ್ ಸಂದರ್ಭದಲ್ಲಿನ ನಿಯಮಗಳ ಪಾಲನೆಯಿಂದ ಒಂದೂವರೆ ವರ್ಷದಲ್ಲಿ ಮಕ್ಕಳಿಗೆ ಲಸಿಕೆ ಕೊಡಿಸಲು ಪಾಲಕರು ಹಿಂದೇಟು ಹಾಕಿದ್ದು ಹಾಗೂ ಸಹಜವಾಗಿ ಉಂಟಾಗುವ ರೋಗನಿರೋಧಕ ಶಕ್ತಿ ಇಲ್ಲದೆ ವೈರಾಣು ಜ್ವರ ಕಾಣಿಸಿಕೊಳ್ಳುತ್ತಿದೆ. ಇದು ಹವಾಮಾನದಲ್ಲಿನ ಏರುಪೇರಿನಿಂದ ಬರುತ್ತಿದೆ. ಆರಂಭದಲ್ಲೇ ರೋಗ ಲಕ್ಷಣ ಗುರುತಿಸಿ ಚಿಕಿತ್ಸೆ ಕೊಡಿಸಿದರೆ ಗುಣ ಹೊಂದುತ್ತಾರೆ. ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ. | ಡಾ. ಬಸವರಾಜು ಪ್ರಾಧ್ಯಾಪಕರು, ಇಂದಿರಾಗಾಂಧಿ ಮಕ್ಕಳ ಆಸ್ಪತೆ
ಶಂಕಿತ ಡೆಂಘೆಗೆ ಬಾಲಕಿ ಬಲಿ
ದಾವಣಗೆರೆ: ಚನ್ನಗಿರಿ ತಾಲೂಕು ಕೆರೆಬಿಳಚಿ ಗ್ರಾಮದಲ್ಲಿ ಶಂಕಿತ ಡೆಂಘೆ ಜ್ವರದಿಂದ 14 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಬಾಲಕಿಗೆ ಸೆ. 11 ರಂದು ಶೀತ, ಜ್ವರ ಕಾಣಿಸಿಕೊಂಡಿದ್ದು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಜ್ವರ ಉಲ್ಬಣಗೊಂಡಿದ್ದರಿಂದ ಚನ್ನಗಿರಿ ಖಾಸಗಿ ಕ್ಲಿನಿಕ್ ಮತ್ತು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಡೆಂಘೆ ಪರೀಕ್ಷೆ ಮಾಡಿದಾಗ ಎನ್.ಎಸ್ -1 ಆಂಟಿಜನ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಆದರೆ ಮಾರ್ಗಸೂಚಿಗಳ ಪ್ರಕಾರ ಈ ಪರೀಕ್ಷೆಯು ನಿರ್ಣಾಯಕ ಅಲ್ಲದೆ ಇರುವುದರಿಂದ ಈ ಪ್ರಕರಣವನ್ನು ‘ಶಂಕಿತ ಡೆಂಘೆ ಮರಣ’ ಎಂದು ಪರಿಗಣಿಸಿದ್ದು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ.
ಸಮಸ್ಯೆ ಏನು?
ದಾವಣಗೆರೆಯ ವಿವಿಧ ಆಸ್ಪತ್ರೆಗಳಿಗೆ ಪ್ರತಿ ದಿನ 2500 ಮಕ್ಕಳು ಚಿಕಿತ್ಸೆಗೆ ಬರುತ್ತಿದ್ದಾರೆ. ಕಳೆದ 15 ದಿನಗಳಲ್ಲಿ ಈ ಸಂಖ್ಯೆ ಹೆಚ್ಚಿದೆ. ಆರ್ಎಸ್ವಿ ಎಂಬ ವೈರಾಣುವಿನಿಂದ ಬರುವ ಈ ಕಾಯಿಲೆ ಮಾರಣಾಂತಿಕವಲ್ಲ. ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಸಾಕು. ಪಾಲಕರಲ್ಲಿ ಆತಂಕ ಬೇಡ. | ಡಾ. ಎನ್.ಕೆ.ಕಾಳಪ್ಪನವರ್ ಮಕ್ಕಳ ತಜ್ಞರು. ಎಸ್ ಎಸ್. ವೈದ್ಯಕೀಯ ಮಹಾ ವಿದ್ಯಾಲಯ, ದಾವಣಗೆರೆ
ಮಾರಣಾಂತಿಕವಲ್ಲ ಆದರೆ, ನಿರ್ಲಕ್ಷ್ಯ ಬೇಡ
ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚು ಕೇಸ್
ವಿಜಯಪುರ ಜಿಲ್ಲೆಯಲ್ಲಿ ವೈರಾಣು ಜ್ವರದಿಂದಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 2000ಕ್ಕೂ ಅಧಿಕ ಮಕ್ಕಳು ಹಾಗೂ ಹಿರಿಯರು ಬಳಲುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ರೋಗಿಗಳ ದೊಡ್ಡ ಸರತಿ ಕಂಡುಬರುತ್ತಿದೆ. ಕಲಬುರಗಿ ನಗರದಲ್ಲೂ ಪ್ರತಿದಿನ ಸರಾಸರಿ 400 ಜನ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಹಳ್ಳಿಗಳಲ್ಲಿ ಈ ಪ್ರಮಾಣ ಇನ್ನಷ್ಟು ಜಾಸ್ತಿ ಇದೆ. ವೈರಲ್ ಫಿವರ್ ಜತೆಗೆ ಡೆಂಘೆ, ಮಲೇರಿಯಾ, ಟೈಫಾಯಿಡ್ನಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ವಿಪರೀತ ಕೆಮ್ಮ, ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ನ್ಯುಮೋನಿಯಾ ಕಾಡುತ್ತಿದೆ.