ಗೋಕರ್ಣ: ಕಳೆದ ಎರಡು ದಿನಗಳಿಂದ ಮಳೆ ಮತ್ತು ಗಾಳಿ ರಭಸ ಹೆಚ್ಚಾಗಿದೆ. ಭಾನುವಾರ ಒಂದೇ ಸಮನೇ ನಿಲ್ಲದೆ ಮಳೆ ಮತ್ತು ಆಗಾಗ ಗಾಳಿಯ ವೇಗ ತೀವ್ರಗತಿ ಪಡೆದು ಸಮುದ್ರ ಮತ್ತು ನದಿ ತೀರದ ಜನರ ಆತಂಕ ಹೆಚ್ಚಿಸಿದೆ.
ಘಟ್ಟದ ಮೇಲೆ ಹೆಚ್ಚಾದ ಮಳೆಯ ಹಿನ್ನೆಲೆಯಲ್ಲಿ ಅಲ್ಲಿಂದ ಕಟ್ಟಿಗೆ ತುಂಡು ಮತ್ತು ಮರ ಮಟ್ಟುಗಳು ಭಾರಿ ಪ್ರಮಾಣದಲ್ಲಿ ಗಂಗಾವಳಿ ನದಿಯಲ್ಲಿ ತೇಲು ಬರುತ್ತಿದೆ. ಇದನ್ನು ಹಿಡಿಯಲು ಗೋಕರ್ಣ ಸಮುದ್ರ ತೀರದಲ್ಲಿ ಮತ್ತು ಗಂಗಾವಳಿ ಗ್ರಾಮದಲ್ಲಿ ನದಿ ಸಮುದ್ರ ಸಂಧಿಸುವ ಪ್ರದೇಶದಲ್ಲಿ ಮೀನುಗಾರರು ದೋಣಿ ಬಳಸಿ ಸುರಿಯುವ ಮಳೆಯಲ್ಲಿ ಅವುಗಳನ್ನು ಹಿಡಿದು ತರುವ ಸಾಹಸ ಮಾಡುತ್ತಿರುವುದು ಕಾಣ ಸಿಗುತ್ತಿದೆ.
ಹಾನಿ ಇಲ್ಲ: ಈತನಕ ಮಳೆಯಿಂದ ಯಾವುದೇ ದೊಡ್ಡ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಕೆಲವು ಕಡೆ ಆಗಾಗ ರಸ್ತೆಗಳು ಜಲಾವೃತವಾಗುತ್ತಿವೆ. ಅಘನಾಶಿನಿ ನದಿಗೆ ಹೊಂದಿಕೊಂಡಿರುವ ತದಡಿ, ಹೊಸ್ಕಟ್ಟ, ತೊರೆಗಜನಿ ಮುಂತಾದೆಡೆಗಳಲ್ಲಿ ನದಿ ಹರಿವು ಹೆಚ್ಚಾಗುವ ಲಕ್ಷಣಗಳಿವೆ.
ಮಳೆಯಲ್ಲೂ ಯಾತ್ರಿಕರ ಹರಿವು: ಸಾಮಾನ್ಯವಾಗಿ ಭಾರಿ ಮಳೆಯ ಎರಡು ತಿಂಗಳುಗಳಲ್ಲಿ ಇಲ್ಲಿಗೆ ಬರುವ ಯಾತ್ರಿಕರ ಸಂಖ್ಯೆಯಲ್ಲಿ ಇಳಿಕೆಯಾಗುತ್ತದೆ. ಆದರೆ, ಈ ವರ್ಷ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯದಿಂದಾಗಿ ವರ್ಷಕ್ಕಿಂತ ಹೆಚ್ಚಿನ ಯಾತ್ರಿಕರು ಮಂದಿರಗಳಲ್ಲಿ ಮತ್ತು ಭೋಜನಾಲಯಗಳಲ್ಲಿ ಕಂಡು ಬರುತ್ತಿದ್ದಾರೆ.