ಕಂಬೆರ್ಲಕಲ ನಂದನಪುರದಲ್ಲಿ ನಡೆದ ‘ರಿಷಿ ಹಸಿರು ಹಬ್ಬದಲ್ಲಿ ಹಲವು ಬಗೆಯ ಹಣ್ಣಿನ ಗಿಡಗಳನ್ನು ನೆಡಲಾಯಿತು. ವೀಣಾ ಕುಲಾಲ್, ಶಂಕರ ಶೆಟ್ಟಿ ನಂದನಕೆರೆ, ಶ್ರೀನಿವಾಸ ದುಗ್ಗನಬೆಟ್ಟು, ಪುರುಷೋತ್ತಮ ಪೂಜಾರಿ ಮೊದಲಾದವರಿದ್ದರು.
ಮಂಗಳೂರು : ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಹಾಗೂ ರಿಷಿ ಕಲಾಕೇಂದ್ರದ ವತಿಯಿಂದ ಶ್ರೀ ಕೋರ್ದಬ್ಬು ದೈವಸ್ಥಾನ ಮಂಜಲಕಟ್ಟೆ ಇವರ ಸಹಯೋಗದಲ್ಲಿ ‘ಹಚ್ಚ ಹಸಿರು, ಸ್ವಚ್ಛ ಉಸಿರು’ ಪರಿಕಲ್ಪನೆಯಡಿ ‘ರಿಷಿ ಹಸಿರು ಹಬ್ಬ-2026’ ಕಂಬೆರ್ಲಕಲ ನಂದನಪುರದಲ್ಲಿ ನಡೆಯಿತು.
ಕರಾವಳಿ ರತ್ನ ಪ್ರಶಸ್ತಿ ಪುರಸ್ಕೃತೆ ಸಮಾಜಸೇವಕಿ ವೀಣಾ ಕುಲಾಲ್ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಲ್ಲಿ ಪ್ರಕೃತಿ ಸಂರಕ್ಷಣೆಯ ಪ್ರಜ್ಞೆಯನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಪರಿಸರ ಮಾಲಿನ್ಯವನ್ನು ತಗ್ಗಿಸಲು ಅರಣ್ಯ ಸಂಪತ್ತು ವೃದ್ಧಿಯಾಗಬೇಕು. ಗಿಡಗಳನ್ನು ಬೆಳೆಸುವ ಮತ್ತು ಸಂರಕ್ಷಿಸುವ ಮನೋಭಾವವನ್ನು ಬಾಲ್ಯದಿಂದಲೇ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ರಿಷಿ ಪ್ರತಿಷ್ಠಾನ ರೂಪಿಸಿರುವ ‘ಶಾಲೆಗೊಂದು ವನ ವಿದ್ಯಾರ್ಥಿಗೊಂದು ಗಿಡ’ ಯೋಜನೆ ಯಶಸ್ವಿಯಾಗಿ ಸಾಗುತ್ತಿದ್ದು, ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕೋರ್ದಬ್ಬು ದೈವಸ್ಥಾನದ ಮುಖ್ಯಸ್ಥ ಶಂಕರ ಶೆಟ್ಟಿ ನಂದನಕೆರೆ ಮಾತನಾಡಿ, ಪರಿಸರ ಉಳಿದರೆ ಮಾತ್ರ ನಮ್ಮ ಮುಂದಿನ ಜೀವನ ಸುಖಕರವಾಗಿರುತ್ತದೆ. ನಾವು ಆರೋಗ್ಯವಂತರಾಗಿ ಬದುಕಬೇಕಾದರೆ ಪ್ರಕೃತಿಯ ಸಮತೋಲನ ಕಾಪಾಡುವುದು ಅತ್ಯಗತ್ಯ ಎಂದರು.
ದೈವಸ್ಥಾನದ ಮುಖಂಡರಾದ ಶ್ರೀನಿವಾಸ ದುಗ್ಗನಬೆಟ್ಟು, ಪುರುಷೋತ್ತಮ ಪೂಜಾರಿ, ಶೇಖರ್ ಕುಲಾಲ್, ಮಂಜುನಾಥ್ ಪ್ರಭು, ನಿತ್ಯಾನಂದ ಕುಲಾಲ್, ಕರುಣಾಕರ್, ಪ್ರತಿಷ್ಠಾನದ ಅಧ್ಯಕ್ಷೆ ಕೀರ್ತನಾ ಕುಲಾಲ್, ಸಂಸ್ಥಾಪಕ ದಿವಾಕರ್ ಪದ್ಮುಂಜ, ಸಂಚಾಲಕಿ ದೇವಿಕಾ ಸುಳ್ಯ, ಯಕ್ಷಗಾನ ಗುರು ವಿಶ್ವನಾಥ ಪದ್ಮುಂಜ, ಸಂಗೀತ ಸುವರ್ಣ,ಸುಜಾತ ಹಾಗೂ ರಿಷಿ ಕಲಾಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಂದಿತಾ ಯು. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಲಾಕೇಂದ್ರದ ವಿದ್ಯಾ ಎ.ಎಸ್. ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಮಂಗಳೂರು ನಗರದ ವಿವಿಧ ಭಾಗಗಳಲ್ಲಿ ಹಲವು ಬಗೆಯ ಹಣ್ಣಿನ ಗಿಡಗಳು ಸೇರಿದಂತೆ ವಿವಿಧ ಸಸಿಗಳನ್ನು ನೆಡಲಾಯಿತು. ಕಳೆದ ವರ್ಷ ನೆಟ್ಟ ಗಿಡಗಳ ಪೋಷಣೆ ಹಾಗೂ ಸಂರಕ್ಷಣಾ ಕಾರ್ಯವನ್ನೂ ಇದೇ ಸಂದರ್ಭದಲ್ಲಿ ಕೈಗೊಳ್ಳಲಾಯಿತು.