ಜಿಲ್ಲೆ

ಸರ್ಕಾರ ನಮ್ಮೊಂದಿಗಿದೆ ಎಂಬ ಭಾವನೆಯಲ್ಲಿ ಗಲಭೆಕೋರರು

ಹುಬ್ಬಳ್ಳಿ : ಏನೇ ಗಲಭೆ ಮಾಡಿದರೂ ಕಾಂಗ್ರೆಸ್ ಸರ್ಕಾರ ನಮ್ಮೊಂದಿಗಿದೆ ಎಂಬ ಒಂದು ಕೋಮಿನ ಜನರ ಮನೋಭಾವನೆಯೇ ಮೈಸೂರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಲು ಕಾರಣ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಹಾಗೂ ಪೊಲೀಸರ ಮೇಲೆ ಕಲ್ಲೆಸೆದಿದ್ದ ಆರೋಪಿಗಳನ್ನು ಅಮಾಯಕರೆಂದು ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿತು. ಸರ್ಕಾರದ ಇಂತಹ ಕ್ರಮಗಳಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿಗಡಾಯಿಸುತ್ತಿದೆ ಎಂದು ದೂರಿದರು. ಮತಬ್ಯಾಂಕ್​ಗಾಗಿ ಕಾಂಗ್ರೆಸ್ ಸರ್ಕಾರ ಒಂದು ಕೋಮಿನ ಜನರ ಅತಿಯಾದ ತುಷ್ಟೀಕರಣ ಮಾಡುತ್ತಿದೆ. ಇದರಿಂದಾಗಿ ಅವರಿಗೆ ಪೊಲೀಸರೆಂದರೆ ಭಯವಿಲ್ಲದಂತಾಗಿದೆ. ಕಾನೂನಿನ ಬಗ್ಗೆ ಗೌರವವೂ ಇಲ್ಲದಂತಾಗಿದೆ ಎಂದರು.

ಹಳೇ ಹುಬ್ಬಳ್ಳಿ ಗಲಭೆಯ ನಂತರ ಆರೋಪಿಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿತ್ತು. ಹಾಗೆ ಮಾಡಿದ್ದರೆ ತಪ್ಪು ಕೆಲಸ ಮಾಡಬಾರದೆಂಬ ಅರಿವಾದರೂ ಆ ಕೋಮಿನವರಿಗೆ ಇರುತ್ತಿತ್ತು ಎಂದರು.

ಸರ್ಕಾರದ ಮತಬ್ಯಾಂಕ್ ರಾಜಕಾರಣ, ತುಷ್ಟೀಕರಣ ನೀತಿಗಳು ಪೊಲೀಸರ ಮನೋಸ್ಥೈರ್ಯವನ್ನು ಕುಂದಿಸಿವೆ. ಆರೋಪಿಗಳನ್ನು ಬಂಧಿಸಿದರೂ, ಸರ್ಕಾರ ಬಿಡುಗಡೆಗೊಳಿಸುತ್ತದೆ ಎಂಬ ಭಾವನೆ ಪೊಲೀಸ್ ಅಧಿಕಾರಿಗಳಲ್ಲಿ ಮೂಡಿದೆ. ರಾಜ್ಯದಲ್ಲಿ ಅತ್ಯುತ್ತಮ ಪೊಲೀಸ್ ಅಧಿಕಾರಿಗಳು ಇದ್ದಾರೆ. ಅಂಥವರಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದರು.