ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿಯ ಜನತಾ ಕಾಲನಿಯಲ್ಲಿ ಜೂಜಾಟದ ಹಣವನ್ನು ಹಿಂತಿರುಗಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಇಬ್ಬರು ಕೊಲೆಯಾಗಿ ಮೃತಪಟ್ಟಿದ್ದು ಒಬ್ಬ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬುಡ್ಗಜಂಗಮದ ಬಟ್ಟೆ ವ್ಯಾಪಾರಿ ಕೃಷ್ಣಪ್ಪ ಎಂಬುವರ ಸಹೋದರ ಲಿಂಗಮಯ್ಯ (40) ಮತ್ತು ಈತನ ಮಗ ಪ್ರತಾಪ್ (30) ಮೃತರು. ಕೃಷ್ಣಪ್ಪನ ಮತ್ತೊಬ್ಬ ಮಗ ಸಾಗರ್ (25) ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಆಸ್ಪತ್ರೆಗೆ ರವಾನಿಸಲಾಗಿದೆ. ಕಾಲನಿಯ ಈಶ್ವರಪ್ಪನ ಮಗ ವಂಶಿ ಮತ್ತು ಜಾನ್ ಬಾಬು ಮಹಿಮಾರಾಜು ಮತ್ತು ಕೃಷ್ಣಪ್ಪನ ಸಂಬಂಧಿಕರ ನಡುವೆ ಜೂಜಾಟದ ಹಣ ಐದು ಸಾವಿರ ರೂಗಳನ್ನು ನೀಡುವ ವಿಚಾರದಲ್ಲಿ ಗಲಾಟೆ ನಡೆದಿದೆ. ಹಾಗೆಯೇ ರಾಜೀ ಸಂಧಾನದ ಮೂಲಕ ಸಮಾಧಾನಗೊಂಡಿದ್ದಾರೆ. ಆದರೆ,
ಇದೇ ವಿಚಾರದಲ್ಲಿ ಮತ್ತೆ ಗಲಾಟೆ ಮಾಡಿಕೊಂಡಿದ್ದು ರಾತ್ರಿ ಏಕಾಏಕಿ ಬಟ್ಲಹಳ್ಳಿ ಈಶ್ವರಪ್ಪನ ಮಗ ವಂಶಿ, ಜಾನ್ ಬಾಬು ಮಹಿಮಾ ರಾಜು, ಸಾಯಿನಾಥ್, ದೇವರಾಜ್ ಮತ್ತಿತರರ ತಂಡವು ಕೋಳಿ ಪಂದ್ಯಕ್ಕೆ ಬಳಸುವ ಚಾಕುಗಳೊಂದಿಗೆ ಬಂದು ಲಿಂಗಮಯ್ಯ, ಪ್ರತಾಪ್ ಮತ್ತು ಸಾಗರ್ ಗೆ ಇರಿದಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಲ್ ಚೌಕ್ಸೆ ಸ್ಥಳ ಪರಿಶೀಲಿಸಿದ್ದಾರೆ.