ಕಂಪ್ಲಿ ತಹಸೀಲ್ದಾರ್ ಎಸ್.ಶಿವರಾಜಗೆ ವಿವಿಧ ಸಂಘಟನೆ ಪ್ರಮುಖರು ಮನವಿ ಸಲ್ಲಿಸಿದರು. ಪ್ರಮುಖರಾದ ಕಂಬತ್ ರಮೇಶ್, ಬಾಗಲಿ ಮಂಜುನಾಥ, ಡಿ.ಗೋಪಾಲಕೃಷ್ಣ, ಕಟ್ಟೆ ವಿಶ್ವನಾಥ, ಅದ್ದಪ್ಪ ತಿಮ್ಮಪ್ಪ ಇತರರಿದ್ದರು. 
ಜಿಲ್ಲೆ

ದೇವಸ್ಥಾನದ ಜಮೀನಿನ ಹಕ್ಕು ಬದಲಾವಣೆ ಸಲ್ಲ

ಕಂಪ್ಲಿ: ಪಟ್ಟಣದ ಕೋಟೆಯ ಐತಿಹಾಸಿಕ ಶ್ರೀ ಪಂಪಾಪತಿ ದೇವಸ್ಥಾನಕ್ಕೆ ಸೇರಿದ ಸರ್ವೇ ನಂ. 280ರ 1.53ಎಕರೆ ಭೂಮಿಯ ಹಕ್ಕು ಬದಲಾವಣೆ ಮಾಡಬಾರದು ಎಂದು ವಿವಿಧ ಸಂಘಟನೆ ಮುಖಂಡರು ಹಾಗೂ ಸಾರ್ವಜನಿಕರು ತಹಸೀಲ್ದಾರ್ ಎಸ್.ಶಿವರಾಜಗೆ ಶುಕ್ರವಾರ ಮನವಿ ಸಲ್ಲಿಸಿದರು.

ಗ್ರಾಮಸ್ಥ ಕಂಬತ್ ರಮೇಶ ಮಾತನಾಡಿ, ಕೋಟೆಯ ಶ್ರೀ ಪಂಪಾಪತಿ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಕ್ರಿ.ಶ 1552ರ ವಿಜಯನಗರ ಸಾಮ್ರಾಜ್ಯದ ಅರಸ ಸದಾಶಿವರಾಯನ ಆಳ್ವಿಕೆಯಲ್ಲಿ ಈ ದೇವಸ್ಥಾನಕ್ಕೆ ಭೂಮಿಯನ್ನು ದಾನ ನೀಡಿದ ಶಾಸನವಿದೆ. ಶಾಸನದ ಪ್ರಕಾರ ಈ ದೇವಸ್ಥಾನದಲ್ಲಿ ಮಹಾನವಮಿ, ನವರಾತ್ರಿ, ಧನುರ್ಮಾಸ, ಕಾರ್ತೀಕ ದೀಪಾರಾಧನೆ, ಪಂಚಪರ್ವ ಸೇರಿ ಇತರ ಕಾರ್ಯಕ್ರಮ ನಡೆಸಲು ಸರ್ವೇ ನಂ. 280ರ 1.53ಎಕರೆ ಭೂಮಿ ದಾನವಾಗಿ ನೀಡಿದ್ದಾರೆ.

ಆದರೆ, ದೇವಸ್ಥಾನದ ಅರ್ಚಕರು ಇದನ್ನು ಯಾರ ಗಮನಕ್ಕೆ ತರದೆ ಕಂಪ್ಲಿಯ ನೋಂದಣಿ ಕಚೇರಿಯಲ್ಲಿ ಬೇರೆಯವರಿಗೆ ನೋಂದಣಿ ಮಾಡಿಸಿದ್ದಾರೆ. ಭೂಮಿಯ ಕುರಿತು ತಕರಾರು ಇದ್ದರೂ ಅಧಿಕಾರಿಗಳು ನೋಂದಣಿ ಮಾಡಿದ್ದು, ಭೂಮಿಯ ಹಕ್ಕು ಬದಲಾವಣೆ ಮಾಡಿದರೆ ಪ್ರಾಚೀನ ದೇವಸ್ಥಾನ ಪಾಳು ಬೀಳುತ್ತದೆ. ಇದಕ್ಕೆ ನಮ್ಮ ತಕರಾರಿದ್ದು, ಹಕ್ಕು ಬದಲಾವಣೆ ಮಾಡಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಪ್ರಮುಖರಾದ ಕಟ್ಟೆ ವಿಶ್ವನಾಥ, ಬಾಗಲಿ ಮಂಜುನಾಥ, ಡಿ.ಗೋಪಾಲಕೃಷ್ಣ, ಅದ್ದಪ್ಪ ತಿಮ್ಮಪ್ಪ, ನಾಗರಾಜ, ಹಳ್ಳಿ ಕೊಟ್ರೇಶ್, ಕೋಟೆಮೇಗಳ ನಾಗರಾಜ, ಮರಾಠಿ ಶ್ರೀನಿವಾಸ, ಕಟ್ಟೆ ವೀರೇಶ್, ಬೆಟ್ಟದ ರಮೇಶ್, ಕಂಪ್ಲಿ ಮೀನುಗಾರರ ಸಹಕಾರ ಸಂಘ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಪದಾಧಿಕಾರಿಗಳು ಇತರರಿದ್ದರು.