ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಂಸದ ಡಾ ಕೆ.ಸುಧಾಕರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ ಮತ್ತಿತರರು ಇದ್ದರು. 
ಜಿಲ್ಲೆ

ಹಕ್ಕುಪತ್ರ, ಅಭಿವೃದ್ಧಿ ಯೋಜನೆಗಳು ವಾಪಸ್

ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಂಸದ ಡಾ ಕೆ.ಸುಧಾಕರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ ಮತ್ತಿತರರು ಇದ್ದರು.


ಒತ್ತಡದಿಂದಾಗಿರುವ ಬದಲಾವಣೆಗೆ ಸಂಸದರ ಅಸಮಾಧಾನ ನಿಯಮ ಉಲ್ಲಂಸದಂತೆ ಅಧಿಕಾರಿಗಳಿಗೆ ಎಚ್ಚರಿಕೆ

ಚಿಕ್ಕಬಳ್ಳಾಪುರ : ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕೆಲಸಗಳು ಮತ್ತು ಉಚಿತ ನಿವೇಶನ ಹಕ್ಕುಪತ್ರಗಳ ವಿತರಣೆ ಸೇರಿ ವಿವಿಧ ಯೋಜನೆಗಳ ವಿಚಾರವಾಗಿ ಸ್ಥಳೀಯ ಜನಪ್ರತಿನಿಧಿಗಳ ಒತ್ತಡದಿಂದ ಆಗಿರುವ ಬದಲಾವಣೆ ಬಗ್ಗೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಚಿಕ್ಕಬಳ್ಳಾಪುರದಲ್ಲಿ ವಿತರಣೆಯಾದ ಹಕ್ಕುಪತ್ರಗಳನ್ನು ವಾಪಸ್ ಪಡೆದುಕೊಳ್ಳಲು ಆದೇಶಿಸಲಾಗುತ್ತಿದೆ. ಒಂದು ಸರ್ಕಾರದಲ್ಲಿ ಯೋಜನೆಗೆ ಅನುಮೋದನೆ, ಅನುದಾನ ಬಿಡುಗಡೆ ಮತ್ತು ಜಾರಿಗೊಂಡಿರುವುದನ್ನು ಹೇಗೆ ಬದಲಾಯಿಸಲಾಗುತ್ತದೆ? ಇಲ್ಲಿನ ಕೆಲ ಸ್ಥಳೀಯ ಜನಪ್ರತಿನಿಧಿಗಳ ಮಾತಿಗೆ ಕಿವಿಗೊಟ್ಟು ನಿಯಮ ಉಲ್ಲಂಘಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂಬ ಎಚ್ಚರಿಕೆ ಕೊಟ್ಟರು. ಇದೇ ವೇಳೆ ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್‌ಗೆ ಟಾಂಗ್ ನೀಡಿದರು.
ದೊಡ್ಡದಾಗಿ ಭಾಷಣ ಬಿಗಿಯುವುದು, ಮನಸ್ಸಿಗೆ ಬಂದಂತೆ ಮಾತಾಡುವುದು ಅಭಿವೃದ್ಧಿಯಲ್ಲ. ವಿಷಯದ ಅರಿವಿಲ್ಲದ ಯಾರ‌್ಯಾರೋ ಬಂದು ಅಧಿಕಾರದಲ್ಲಿ ಕುಳಿತುಕೊಂಡು, ಊರು ಹಾಳಾಗುತ್ತಿದೆ. ಹಿಂದೆ ನಿರಂತರವಾಗಿ ಒತ್ತಡ ಹೇರಿ, ಕೋಟ್ಯಂತರ ರೂ. ಅನುದಾನ ತರಲಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಉಚಿತ ನಿವೇಶನಕ್ಕಾಗಿ 225.21 ಎಕರೆ ಜಮೀನು ಮಂಜೂರಾಗಿದ್ದು ಬರೋಬ್ಬರಿ 10,800 ಹಕ್ಕುಪತ್ರ ವಿತರಿಸಲಾಗಿದೆ. ಇದು ಒಂದು ರಾತ್ರಿಯಲ್ಲಾದ ಮ್ಯಾಜಿಕ್ ಅಲ್ಲ. ಇಚ್ಛಾಶಕ್ತಿಯ ಕೆಲಸ. ಈಗಲೂ ಯಾರು ಬೇಕಾದರೂ ಹೆಸರು ತೆಗೆದುಕೊಳ್ಳಲಿ, ಆದರೆ, ಬಡವರಿಗೆ ಅನುಕೂಲವಾಗುವುದು ಮುಖ್ಯ ಎಂದರು.

ನಗರೋತ್ಥಾನದಲ್ಲಿ ಅವ್ಯವಸ್ಥೆ
ನಗರೋತ್ಥಾನ ಯೋಜನೆಯಡಿ 44 ಕೋಟಿ ರೂ. ಮಂಜೂರಾಗಿದೆ. ನಗರಸಭಾ ಸದಸ್ಯರ ಅಭಿಪ್ರಾಯದಂತೆ ರೂಪಿಸಿದ ಕ್ರಿಯಾಯೋಜನೆಗೆ ಒಪ್ಪಿಗೆ ಪಡೆದುಕೊಂಡಿದ್ದು ಟೆಂಡರ್ ಆಹ್ವಾನ ಮಾತ್ರ ಬಾಕಿ ಇತ್ತು. ಆದರೆ, ಈಗ ಎಲ್ಲವನ್ನೂ ಅದಲು ಬದಲು ಮಾಡಲಾಗಿದೆ. ಮನಸ್ಸಿಗೆ ಬಂದಂತೆ ಕೆಲಸವನ್ನು ಕೈಗೊಳ್ಳಲಾಗುತ್ತಿದೆ ಎಂದು ಡಾ.ಕೆ. ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.

ರೈಲ್ವೆ ಅಧಿಕಾರಿಗೆ ನೋಟಿಸ್
ದಿಶಾ ಸಭೆಗೆ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳ ಗೈರು ಮತ್ತು ಕಿರಿಯ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಸಂಸದರು ಕಿಡಿಕಾರಿದರು. ಸಂಬಂಧಪಟ್ಟವರಿಗೆ ನೋಟಿಸ್ ನೀಡಲು ಡಾ. ಕೆ. ಸುಧಾಕರ್ ಸೂಚಿಸಿದರು. ಜಿಲ್ಲಾದ್ಯಂತ ರೈಲ್ವೆ ಸೇತುವೆಗಳ ಸಮಸ್ಯೆ, ಹೊಸದರ ನಿರ್ಮಾಣ, ನಂದಿ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಇಕ್ಕಟ್ಟಿಗೆ ಸಿಲುಕಿದ ಅಧಿಕಾರಿಗಳು
ಸಂಸದರ ಪ್ರಶ್ನೆಗಳಿಗೆ ಉತ್ತರಿಸಲು ಆಗದೇ, ಜಿಲ್ಲಾ ಉಸ್ತುವಾರಿ ಸಚಿವರ ಧೋರಣೆಯನ್ನು ಸಮರ್ಥಿಸಿಕೊಳ್ಳಲಾಗದೇ ದಿಶಾ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒ ಇಕ್ಕಟ್ಟಿಗೆ ಸಿಲುಕಿದ ಪ್ರಸಂಗ ನಡೆಯಿತು. ಹಕ್ಕುಪತ್ರಗಳ ವಾಪಸಾತಿ, ಪ್ರಗತಿದಾಯಕ ಕಾಮಗಾರಿಗಳ ಬದಲಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬೆಂಗಳೂರು ಕೇಂದ್ರ ಕಚೇರಿಯ ಆದೇಶದಂತೆ ನಡೆದುಕೊಳ್ಳಲಾಗುತ್ತಿದೆ ಎಂದು ಹೇಳಿ ಸಮರ್ಥಿಸಿಕೊಳ್ಳಲು ಯತ್ನಿಸಿದರು. ಇದಕ್ಕೆ ತೃಪ್ತಿಗೊಳ್ಳದ ಸಂಸದರು, ಯಾರದೋ ಒತ್ತಡಕ್ಕಾಗಿ ಅಲ್ಲ, ಇಲಾಖೆಯ ನಿಯಮಾನುಸಾರ ಕೆಲಸ ಮಾಡಿ, ಜನಪ್ರತಿನಿಧಿಗಳ ನಡುವೆ ಸಿಲುಕಿಕೊಳ್ಳಬೇಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.