ಗುಡಿಬಂಡೆ: ರಸ್ತೆ ಆಗಲೀಕರಣದ ವೇಳೆ ಮನೆಗಳನ್ನು ಕಳೆದುಕೊಂಡ ದಲಿತರು ತಮಗೆ ಮಂಜೂರಾಗಿರುವ ಭೂಮಿಯಲ್ಲಿ ಪ್ರತಿಭಟನೆ ಮಾಡಿರುವುದರಿಂದ ದೂರು ದಾಖಲು ಮಾಡಿರುವುದು ಸಮಂಜಸವಲ್ಲ, ನ್ಯಾಯ ಕೇಳುವುದೇ ತಪ್ಪಾ ಎಂದು ದಲಿತ ಮುಖಂಡರು ಪೊಲೀಸರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು ಪ್ರತಿಭಟನಾ ನಿರತರೊಂದಿಗೆ ಮಂಗಳವಾರ ನಡೆದ ಸಂಧಾನ ಸಬೆಯಲ್ಲಿ ದಲಿತ ಮುಖಂಡರು ಪೊಲೀಸರ ವಿರುದ್ದ ಅಸಮಾಧಾನ ಹೊರಹಾಕಿದರು.
ದಲಿತರು ತಮ್ಮ ನಿವೇಶನಗಳಿಗಾಗಿ ಸರ್ಕಾರ ಮೀಸಲಿಟ್ಟಿರುವ ಭೂಮಿಯಲ್ಲಿ ತ್ವರಿತವಾಗಿ ನಿವೇಶನಗಳನ್ನು ನೀಡಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರೆ ತಪ್ಪಾ? ಹಕ್ಕನ್ನು ಕೇಳುವುದು ಬಿಟ್ಟರೇ ಕಾನೂನು ಉಲ್ಲಂಘಿಸುವ ಯಾವುದೇ ಕೆಲಸ ಮಾಡಿಲ್ಲ. ಆದರೂ ಪೊಲೀಸರು 24 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದು ಎಷ್ಟರಮಟಗೆ ಸರಿ ಎಂದು ದಲಿತ ಮುಖಂಡರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಸದರಿ ಜಮೀನಿನ ವಿಚಾರದಲ್ಲಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದರಿಂದ ಅ ಜಮೀನಿಗೆ ಪ್ರವೇಶ ಮಾಡಬಾರದೆಂದು ತಿಳಿಸಿದರು.
ತಾಲೂಕಿನ ಅನೇಕ ಗ್ರಾಮಗಳಲ್ಲಿ ಸ್ಮಶಾನಗಳು ಇಲ್ಲ, ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಜಾಗ ನೀಡಿಲ್ಲ, ಬಡ ದಲಿತರ ದರಖಾಸ್ತು ಜಮೀನು ಮಂಜೂರು ಮಾಡುವುದು, ಇಲಾಖೆಗಳಲ್ಲಿ ಆಗಿರುವ ಆಕ್ರಮಗಳನ್ನು ತನಿಖೆ ಮಾಡುವುದು ಸೇರಿ ಇತರ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲವಾದಲ್ಲಿ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಧರಣಿನಿರತು ಎಚ್ಚರಿಸಿದರು.
ತಹಸೀಲ್ದಾರ್ ಸಿಗ್ಬತ್‌ವುಲ್ಲಾ ಮಾತನಾಡಿ, ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು. ಈ ಬಗ್ಗೆ ದಲಿತ ಮುಖಂಡರೊಂದಿಗೆ ಸಭೆ ನಡೆಸಬೇಕೆಂದು ಮೇಲಧಿಕಾರಿಗಳು ಸೂಚಿಸಿದ್ದು, ಇಂದಿನ ಸಭೆಯಲ್ಲಿ ವ್ಯಕ್ತವಾದ ಅಂಶಗಳನ್ನು ಜಿಲ್ಲಾ ಅಧಿಕಾರಿಗಳು ನಡೆಸುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ತಾಪಂ ಇಒ ನಾಗಮಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ಗ್ರೇಡ್-2 ತಹಶಿಲ್ದಾರ್ ತುಳಸಿ, ಪಪಂ ಮುಖ್ಯಾಧಿಕಾರಿ ಸಬಾ ಶಿರೀನ್, ಆರಕ್ಷಕ ಉಪ ನಿರೀಕ್ಷಕ ಗಣೇಶ್ ಸೇರಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದರು.
ಮುಖಂಡರಾದ ಜಿ.ವಿ.ಗಂಗಪ್ಪ, ರಮಣ, ಇಸ್ಕೂಲು ನರಸಿಂಹಪ್ಪ, ರಾಜು, ಆದಿನಾರಾಯಣಪ್ಪ ಸೇರಿ ಇತರರು ಭಾಗವಹಿಸಿದ್ದರು.