ಹುಲಿಕಲ್ ಸೇತುವೆಯಿಂದ ಪಲ್ಟಿಯಾದ ಲಾರಿ. 
ಜಿಲ್ಲೆ

ಸೇತುವೆ ಮೇಲೆ ಸಂಚಾರ ಹುಲಿ ಸವಾರಿ

Shivamogga - Desk - Praveena Kumar S

ಹೊಸನಗರ: ಹುಲಿಕಲ್ ಸೇತುವೆಯ ಕಾಂಕ್ರೀಟ್ ರಸ್ತೆ ಕಾಮಗಾರಿ ಅವ್ಯವಸ್ಥೆಯಿಂದಾಗಿ ನಿರಂತರ ಅಪಘಾತಕ್ಕೆ ರಹದಾರಿ ಮಾಡಿಕೊಟ್ಟಂತಾಗಿದೆ. ಕಿರಿದಾದ ರಸ್ತೆ, ತಡೆಗೋಡೆ ಇರದ ಕಾರಣ ಸರಣಿ ಅಪಘಾತಕ್ಕೆ ಕಾರಣವಾಗಿದೆ.
ಜಿಲ್ಲೆಯ ಮಹತ್ವದ ಘಾಟ್ ಸಂಪರ್ಕಗಳಲ್ಲಿ ಹುಲಿಕಲ್ ಘಾಟ್ ಕೂಡ ಒಂದು. ಆಗುಂಬೆಯಲ್ಲಿ ಸಣ್ಣ ವಾಹನಗಳ ಸಂಚಾರ ಹೆಚ್ಚು. ಕೊಲ್ಲೂರು ಘಾಟ್ ಪ್ರವಾಸಿ ವಾಹನಗಳಿಗೆ ಸೀಮಿತವಾಗಿದೆ. ಆದರೆ ಹುಲಿಕಲ್ ಘಾಟ್‌ನಲ್ಲಿ ಮಂಗಳೂರಿನಿಂದ ಬರುವ ಪೆಟ್ರೋಲಿಯಂ ಉತ್ಪನ್ನಗಳು, ಅಗತ್ಯ ಸರಕುಗಳನ್ನು ಹೊತ್ತ ಬಹುತೇಕಗಳು ವಾಹನಗಳು ಸಂಚರಿಸುತ್ತವೆ. 10ರಿಂದ 20 ಚಕ್ರದ ಬೃಹತ್ ವಾಹನಗಳು ನಿರಂತರವಾಗಿ ಸಂಪರ್ಕ ಸಾಧಿಸುತ್ತವೆ. ಎಲ್ಲ ವಾಹನಗಳು ಹುಲಿಕಲ್ ಸೇತುವೆ ಮೇಲೆ ಸಂಚರಿಸಬೇಕಿದ್ದು ಕಾಂಕ್ರೀಟ್ ರಸ್ತೆ ಕಾಮಗಾರಿಯ ಅವ್ಯವಸ್ಥೆ ಆತಂಕಕ್ಕೆ ಕಾರಣವಾಗಿದೆ.
15 ದಿನಗಳ ಹಿಂದೆ ಜೋಳ ತುಂಬಿದ ಲಾರಿ ಪಲ್ಟಿ ಹೊಡೆದು ಸಂಪೂರ್ಣ ಜಖಂಗೊಂಡಿತ್ತು. ಶುಕ್ರವಾರ ಟೈಲ್ಸ್ ಸಾಗಿಸುತ್ತಿದ್ದ ಭಾರಿ ವಾಹನ ಇದೇ ಸ್ಥಳದಲ್ಲಿ ಅಪಘಾತಗೊಂಡು ನೇರವಾಗಿ ಹಿನ್ನೀರಿಗೆ ಬಿದ್ದಿದ್ದು ವಾಹನ ಚಾಲಕ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಈ ಭಾಗದಲ್ಲಿ ಬಸ್ಸುಗಳು ರಾತ್ರಿ ಹಗಲೆನ್ನೆದೆ ನೂರಾರು ಸಂಖ್ಯೆಯಲ್ಲಿ ಸಂಚರಿಸುತ್ತವೆ. ಅವಘಡ ಮುಂದುವರಿದರೆ ಮುಂದೇನು ಎಂಬ ಆತಂಕ ಸ್ಥಳೀಯರದ್ದಾಗಿದೆ.
ಈಗಾಗಲೇ ಹುಲಿಕಲ್ ಘಾಟ್‌ನಲ್ಲಿ ಸೇತುವೆ ಸೇರಿದಂತೆ 5 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗಿದೆ. 10 ಮೀಟರ್ ಅಗಲ ಇರಬೇಕಾದ ರಸ್ತೆಯನ್ನು ಕೇವಲ 7 ಮೀಟರ್‌ಗೆ ಇಳಿಸಲಾಗಿದೆ. ಇದು ಎದುರು ಬರುವ ವಾಹನಗಳಿಗೆ ಸೈಡ್ ಕೊಡಲು ಸಾಧ್ಯವಾಗದೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಕಾರಣವಾಗುತ್ತಿದೆ.
ವಾರಾಹಿ ಯೋಜನೆಯ ಭೂಗರ್ಭ ವಿದ್ಯುದಾಗಾರಕ್ಕೆ ಪಿಕಪ್ ಅಣೆಕಟ್ಟು ಮೂಲಕ ನೀರು ಹರಿಸಲಾಗುತ್ತಿದೆ. ಇದರ ಹಿನ್ನೀರು ಪ್ರದೇಶವೇ ಹುಲಿಕಲ್ ಹೊಳೆ. ಕೆಲದಿನಗಳಿಂದ ಉತ್ತಮ ಮಳೆಯಾದ ಕಾರಣ ಹೊಳೆ ತುಂಬಿಕೊಂಡಿದೆ. ಎರಡೂ ಬದಿ ನೀರು ತುಂಬಿಕೊಂಡಿದ್ದು ನಡುವಿನ ಸೇತುವೆ ಮೇಲೆ ವಾಹನಗಳು ಸಂಪರ್ಕ ಸಾಧಿಸಬೇಕು. ಜತೆಗೆ ಅಪಾಯಕಾರಿ ತಿರುವು ಕೂಡ ಹೊಂದಿದ್ದು ಕೊಂಚ ಎಡವಟ್ಟಾದರೂ ಭಾರಿ ಅನಾಹುತಕ್ಕೆ ಕಾರಣವಾಗುತ್ತದೆ.
ಹುಲಿಕಲ್ ಸೇತುವೆ ಮೇಲೆ ಸಾಗುವ ರಸ್ತೆ ಕಾಂಕ್ರೀಟ್‌ಕರಣಗೊಂಡಿದ್ದು 10 ಮೀಟರ್ ಇರಬೇಕಾದ ರಸ್ತೆ ಅಗಲವನ್ನು 7 ಮೀಟರ್‌ಗೆ ಇಳಿಸಲಾಗಿದೆ. ಅಲ್ಲದೆ ರಸ್ತೆ ಬದಿಯಲ್ಲಿ ಮಣ್ಣು ತುಂಬಿರುವುದು ಸಮರ್ಪಕವಾಗಿಲ್ಲ ಲಾರಿ ಹಿನ್ನೀರಿಗೆ ಬಿದ್ದಿದ್ದು ಚಾಲಕ ಏನೋ ಬಚಾವಾಗಿದ್ದಾನೆ. ಇನ್ನು ಪ್ರಯಾಣಿಕರನ್ನು ಹೊತ್ತ ಬಸ್ಸು ಉರುಳಿದರೆ ದೊಡ್ಡ ಅನಾಹುತವೇ ಸೃಷ್ಟಿಯಾಗುತ್ತದೆ ಎನ್ನುತ್ತಾರೆ ಮಾಸ್ತಿಕಟ್ಟೆಯ ಎಚ್.ಟಿ.ಅನಿಲ್.
ಈಗಾಗಲೇ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. 7 ಮೀಟರ್ ರಸ್ತೆಯ ಅಗಲವನ್ನು 10 ಮೀಟರ್‌ಗೆ ವಿಸ್ತರಿಸಲಾಗುವುದು. ಅಲ್ಲೇ ತಡೆಗೋಡೆ ಕಾಮಗಾರಿ ನಿರ್ವಹಿಸಬೇಕಿದೆ. ಮಳೆ ಕಡಿಮೆ ಆಗುತ್ತಿದ್ದಂತೆ ಕಾಮಗಾರಿಗೆ ಚುರುಕು ಮುಟ್ಟಿಸಲಾಗುವುದು. ಅಲ್ಲಿಯವರೆಗೆ ಅವಘಡ ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ್ ಭರವಸೆ ನೀಡಿದರು.