ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಭಾನುವಾರ ಕಲ್ಪಂಕದ ಬಳಿ ತೋಡಿಗೆ ಉರುಳಿಬಿದ್ದ ಪರಿಣಾಮ ನಾಲ್ವರು ಭಕ್ತರು ಗಾಯಗೊಂಡಿದ್ದಾರೆ. ಕೃಷ್ಣಮಠದ ಪಾಕಿರ್ಂಗ್ ಸ್ಥಳಕ್ಕೆ ಹೋಗುವ ದಾರಿ ಮಧ್ಯೆ ಇರುವ ಕಲ್ಸಂಕ ಬಳಿ ಈ ಘಟನೆ ಸಂಭವಿಸಿದೆ.
ಆಟೋ ರಿಕ್ಷಾದಲ್ಲಿ ಆರು ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದ್ದು, ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರೆಲ್ಲರೂ ಉಡುಪಿ ಕೃಷ್ಣದೇವರ ದೇವರ ದರ್ಶನಕ್ಕಾಗಿ ಆಗಮಿಸಿದ್ದರು. ದರ್ಶನ ಪಡೆದು ಹಿಂತಿರುಗುತ್ತಿರುವ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಟೋ ಚಾಲಕನ ಕೈಗೂ ಗಾಯವಾಗಿದೆ. ಅಪಘಾತದ ರಭಸಕ್ಕೆ ಆಟೋದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಕಲ್ಸಂಕದಿಂದ ಕೃಷ್ಣಮಠದ ಪಾಕಿರ್ಂಗ್ ಸ್ಥಳಕ್ಕೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ತಡೆಬೇಲಿ ಇಲ್ಲದ್ದರಿಂದ ಇಂತಹ ಅಪಘಾತ ಸಂಭವಿಸುತ್ತಿದೆ. ಇತ್ತೀಚೆಗೆ ಇದೇ ವಿಚಾರವಾಗಿ ವಿಜಯವಾಣಿ ವರದಿಯನ್ನೂ ಪ್ರಕಟಿಸಿತ್ತು. ಆಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.