ಜಿಲ್ಲೆ

ದಾಖಲೆಯಿಲ್ಲದ ಅಕ್ಕಿ ಮೂಟೆ ವಶ: ಆರ್‌ಎಪಿಸಿಎಂಎಸ್ ಗೋಡೌನ್ ಸೇರಿದ 120 ಚೀಲ

reportermys

ಮಂಡ್ಯ: ಇಲ್ಲಿನ ವಿ.ವಿ ನಗರದ ಜೈಶಂಕರ್ ರೈಸ್‌ಮಿಲ್‌ನಲ್ಲಿ ದಾಖಲೆಯಿಲ್ಲದೇ ಸಂಗ್ರಹಿಸಿಟ್ಟಿದ್ದ ಸುಮಾರು 60 ಟನ್ ತೂಕವಿರುವ 120 ಚೀಲ ಅಕ್ಕಿ ಮೂಟೆಗಳನ್ನು ಗುರುವಾರ ಸಂಜೆ ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಮಾಲೀಕರು ಕೆಲವೊಂದು ಬಿಲ್‌ಗಳನ್ನು ಹಾಜರುಪಡಿಸಿದ್ದರು. ಆದರೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ನಕಲಿ ಬಿಲ್ ಎಂಬ ಸಂಶಯ ಬಂದಿದೆ. ಈ ಹಿನ್ನೆಲೆಯಲ್ಲಿ ಅಕ್ಕಿ ಮೂಟೆಯನ್ನು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಮೂರು ದಿನದೊಳಗೆ ಅಸಲಿ ಬಿಲ್ ಸಲ್ಲಿಸುವಂತೆ ಕಾಲಾವಕಾಶ ನೀಡಿ ನೋಟಿಸ್ ಜಾರಿ ಮಾಡಲಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಇಲಾಖೆ ಉಪನಿರ್ದೇಶಕ ಎಂ.ಪಿ. ಕೃಷ್ಣಕುಮಾರ್, 120 ಚೀಲಗಳಲ್ಲಿ ತುಂಬಿರುವ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಯಾವುದೇ ಕಾರಣಕ್ಕೂ ಇದನ್ನು ಬಿಡುವ ಪ್ರಶ್ನೆಯೇ ಇಲ್ಲ. ನಿಯಮಾನುಸಾರ ಯಾವ ರೀತಿ ಕ್ರಮ ಕೈಗೊಳ್ಳಬೇಕೋ ಅದನ್ನು ಪಾಲಿಸಲಾಗುವುದು. ಅಕ್ಕಿಯ ಸ್ಯಾಂಪಲ್‌ನ್ನು ಸಹ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರಯೋಗಾಲಯದ ವರದಿ ಬಂದ ನಂತರ ಪಡಿತರ ಅಕ್ಕಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ.
ಮರೀಗೌಡ ಬಡಾವಣೆಯಲ್ಲಿರುವ ರೈಸ್‌ಮಿಲ್‌ನಿಂದ ಅಕ್ಕಿ ತರಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಮಿಳುನಾಡಿನಿಂದಲೂ ಅಕ್ಕಿ ಬಂದಿರುವ ಬಗ್ಗೆ ಮಾಲೀಕರು ತಿಳಿಸಿದ್ದಾರೆ. ಅವರು ಅಕ್ಕಿಯನ್ನು ಖರೀದಿಸಿ ತಂದಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಕೈಬರಹದ ಬಿಲ್ ಹಾಜರುಪಡಿಸಿರುವುದರಿಂದ ನಮಗೆ ಅದರ ಬಗ್ಗೆ ಸಂಶಯ ವ್ಯಕ್ತವಾಗಿದೆ. ಆನ್‌ಲೈನ್ ಬಿಲ್‌ನ್ನು ಅವರು ನೀಡಿಲ್ಲ. ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಬಿಲ್ ಕಳುಹಿಸಿ ಜಿಎಸ್‌ಟಿ ಪಾವತಿಸಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.