ಜಿಲ್ಲೆ

ಹುಬ್ಬಳ್ಳಿಯಲ್ಲಿ ದೇಸಿ ಅಕ್ಕಿ ಮೇಳ

Dharwada - Basavaraj Idli

ಹುಬ್ಬಳ್ಳಿ: ದೇಸಿ ಅಕ್ಕಿಗಳ ವೈವಿಧ್ಯದ ಬಗ್ಗೆ ಗ್ರಾಹಕರು ಮತ್ತು ರೈತರಿಗೆ ಅರಿವು ಮೂಡಿಸುವ ಉದ್ದೇಶದಿಂದ ಸಹಜ ಸಮೃದ್ಧ ಮತ್ತು ದೇವಧಾನ್ಯ ಸಂಸ್ಥೆಗಳೂ ಜೊತೆಗೂಡಿ ಆಗಸ್ಟ್ 23 ಮತ್ತು 24ರಂದು ನಗರದ ಗೋಕುಲ ರಸ್ತೆ ಅರ್ಬನ್ ಒಯಸಿಸ್ ಮಾಲ್ ನಲ್ಲಿ ದೇಸಿ ಅಕ್ಕಿ ಮೇಳವನ್ನು ಏರ್ಪಡಿಸಿವೆ.

ಅರ್ಬನ್ ಒಯಸಿಸ್ ಮಾಲ್ ಆಶ್ರಯದಲ್ಲಿ ನಡೆಯಲಿರುವ ಮೇಳದಲ್ಲಿ ಕೆಂಪು, ಕಪ್ಪು, ಕೆನೆ ಬಣ್ಣದ, ಮತ್ತು ಪರಿಮಳದ ಬಗೆ ಬಗೆಯ ಅಕ್ಕಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಔಷಧೀಯ ಗುಣದ ಕಪ್ಪಕ್ಕಿ ಮತ್ತು ಕರಿಗಜಿವಿಲಿ ಮಾರಾಟ ಈ ವರ್ಷದ ವಿಶೇಷ.

ಕರ್ನಾಟಕದ ಜನಪ್ರಿಯ ದೇಸಿ ಅಕ್ಕಿ ತಳಿಗಳಾದ ರಾಜಮುಡಿ, ದೊಡ್ಯಗ, ದೊಡ್ಡ ಬೈರ ನೆಲ್ಲು, ಸಿದ್ಧ ಸಣ್ಣ, ಅಂದನೂರು ಸಣ್ಣ, ಉದುರು ಸಾಲಿ, ಬೆಳಗಾವಿ ಭಾಸುಮತಿ, ಗಿಣಿ ಸಾಲಿ, ಸೋನಾ ಮಸೂರಿ ಮೊದಲಾದ ಅಕ್ಕಿ ಮಾರಾಟಕ್ಕೆ ಸಿಗಲಿವೆ.

200ಕ್ಕೂ ಹೆಚ್ಚಿನ ದೇಸಿ ಭತ್ತದ ತಳಿಗಳ ಪ್ರದರ್ಶನವಿರುತ್ತದೆ. ಮುಂಗಾರಿಗೆ ಬಿತ್ತಲು ಗುಣಮಟ್ಟದ ಬಿತ್ತನೆ ಭತ್ತ ಸಿಗಲಿದೆ. ಸಾವಯವ ಪದಾರ್ಥಗಳು, ಹಣ್ಣು ಹಂಪಲು, ನಾಟಿ ಬೀಜ ಮತ್ತು ಮೌಲ್ಯವರ್ಧಿತ ಪದಾರ್ಥಗಳು ಇಲ್ಲಿರಲಿವೆ.

ಆ. 23ರಂದು ಬೆಳಗ್ಗೆ 10ಕ್ಕೆ ಡಿಸಿಪಿ ರವೀಶ್ ಸಿ.ಆರ್. ಮೇಳ ಉದ್ಘಾಟಿಸುವರು. ಸವಣೂರಿನ ದೊಡ್ಡ ಹುಣಸೆಕಲ್ಮಠದ ಶ್ರೀಚನ್ನ ಬಸವೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಾವೇರಿಯ ಅಗಡಿ ಅಕ್ಕಿ ಮಠದ ಶ್ರೀ ಗುರುಲಿಂಗಸ್ವಾಮೀಜಿ "ಅನ್ನ ತಿನ್ನಿ' ದೇಸಿ ಅಕ್ಕಿ ಮಾಹಿತಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಅರ್ಬನ್ ಓಯಸಿಸ್ ನಿರ್ದೇಶಕರಾದ ದೀಪಕ್ ಲುಲ್ಲಾ, ಸುನಿಲ್ ಬಜಾಜ್ ಮತ್ತು ದೇಸಿ ಭತ್ತ ಬೆಳೆಗಾರರ ಬಳಗದ ಪ್ರೇಮಾ ಭಾಗವಹಿಸಲಿದ್ದಾರೆ.

ದೇಸಿ ಅಕ್ಕಿ ಅಡುಗೆ ಸ್ಪರ್ಧೆ
ಅನ್ನ ಸಂಸ್ಕೃತಿಯ ಮಹತ್ವವನ್ನು ಪರಿಚಯಿಸುವ ದೃಷ್ಟಿಯಿಂದ "ಅಕ್ಕಿ ಅಡುಗೆ ಸ್ಪರ್ಧೆ' ಏರ್ಪಡಿಸಲಾಗಿದೆ. ದೇಸಿ ಅಕ್ಕಿಯಿಂದ ಮಾಡಿದ ಯಾವುದೇ ಅಡುಗೆಯನ್ನು ಮನೆಯಲ್ಲಿ ಮಾಡಿ, ಆ. 24ರಂದು ಮಧ್ಯಾಹ್ನ 12.30ಕ್ಕೆ ಮೇಳಕ್ಕೆ ತರಬೇಕು. ಆಯ್ದ ಮೂರು ಉತ್ತಮ ಅಡುಗೆಗಳಿಗೆ ಬಹುಮಾನ ನೀಡಲಾಗುತ್ತದೆ.

5ರಿಂದ 15 ವರ್ಷದ ಒಳಗಿನ ಮಕ್ಕಳಿಗಾಗಿ "ನಾ ಕಂಡ ಭತ್ತದ ಲೋಕ' ಚಿತ್ರಕಲಾ ಸ್ಪರ್ಧೆ ಆ. 24ರಂದು ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ. ಆಸಕ್ತ ಮಕ್ಕಳು ಭತ್ತದ ಕೃಷಿ, ಸಂಸ್ಕೃತಿ, ಮಾರುಕಟ್ಟೆ ಮತ್ತು ಕಣ್ಮರೆಯಾಗುತ್ತಿರುವ ಭತ್ತದ ವೈವಿಧ್ಯದ ವಿಷಯದ ಬಗ್ಗೆ ಸ್ಥಳದಲ್ಲೇ ಚಿತ್ರ ಬರೆಯಬೇಕು. ತೀರ್ಪುಗಾರರ ಮೆಚ್ಚುಗೆ ಗಳಿಸುವ ಚಿತ್ರಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.