ಜಿಲ್ಲೆ

ಅನ್ನ ನೀಡುತ್ತಿದ್ದವರಿಗೀಗ ಹಸಿವು..!

ಬೆಳಗಾವಿ: ಸವದತ್ತಿ ತಾಲೂಕಿನ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲೆಲ್ಲ ತಿರುಗಾಡಿ ಭಕ್ತರು ಮತ್ತು ವ್ಯಾಪಾರಸ್ಥರಿಗೆ ನಿತ್ಯವೂ ಊಟ ನೀಡುತ್ತ, ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದವರೀಗ ಅತಂತ್ರರಾಗಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಕಳೆದ 40 ದಿನಗಳಿಂದ ಊಟ ಮಾರಾಟ ಸ್ಥಗಿತಗೊಂಡಿದ್ದರಿಂದ ಇಲ್ಲಿನ 20ಕ್ಕೂ ಅಧಿಕ ಕುಟುಂಬಗಳ ಬದುಕು ಹಾಗೂ ಆದಾಯ ಶೂನ್ಯವಾಗಿದೆ. ಯಲ್ಲಮ್ಮನಗುಡ್ಡ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದು. ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ಮತ್ತಿತರ ರಾಜ್ಯಗಳಿಂದ ವರ್ಷವಿಡೀ ಯಲ್ಲಮ್ಮನ ಸಾನ್ನಿಧ್ಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಹೀಗೆ ಬರುವ ಭಕ್ತ ಸಮೂಹಕ್ಕೆ ಉತ್ತರ ಕರ್ನಾಟಕದ ದೇಸಿ ಊಟದ ರುಚಿ ತೋರಿಸುತ್ತಿದ್ದವರ ಜೀವನವೀಗ ಸಪ್ಪೆಯಾಗಿದೆ.

ಖಡಕ್ ರೊಟ್ಟಿ ಊಟ: ಸವದತ್ತಿ ತಾಲೂಕಿನ ಚಿಕ್ಕುಂಬಿ, ಉಗರಗೋಳ, ಹಿರೇಕುಂಬಿ ಮತ್ತು ಹರ್ಲಾಪುರ ಗ್ರಾಮಗಳ ಮಹಿಳೆಯರು ಖಡಕ್ ಜೋಳದ ರೊಟ್ಟಿ, ಪಲ್ಯ, ಅನ್ನ-ಸಾರು, ವಡೆ, ಹಾಲು ಹಾಗೂ ಕೆನೆ ಮೊಸರನ್ನು ಒಂದು ಬುಟ್ಟಿಯಲ್ಲಿ ಹೊತ್ತು ನಿತ್ಯವೂ ಇಲ್ಲಿಗೆ ಬಂದು ಮಾರಾಟ ಮಾಡುತ್ತಿದ್ದರು. ಅನೇಕ ಹೋಟೆಲ್‌ಗಳು ಇಲ್ಲಿದ್ದರೂ ಈ ಮಹಿಳೆಯರು ತಯಾರಿಸಿದ ಊಟದ ರುಚಿ ಸವಿಯುತ್ತಿದ್ದರು. ಆದರೆ, ಲಾಕ್‌ಡೌನ್ ಜಾರಿಯಿಂದಾಗಿ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಿದ್ದರಿಂದ ಸದಾ ಭಕ್ತಸಾಗರದಿಂದ ತುಂಬಿ ತುಳುಕುತ್ತಿದ್ದ ಏಳುಕೊಳ್ಳದ ನಾಡೀಗ ಜನರಿಲ್ಲದೆ ಭಣಗುಡುತ್ತಿದೆ. ಇದರಿಂದ ಊಟ ನೀಡುತ್ತಿದ್ದ ಈ ಮಹಿಳೆಯರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಕೈಚಾಚಲೂ ಮನಸ್ಸಿಲ್ಲ: 4 ವರ್ಷದ ಹಿಂದೆ ಪತಿ ನಿಧನರಾಗಿದ್ದಾರೆ. ಆಸರೆಗಾಗಿ ಮಕ್ಕಳೂ ಇಲ್ಲ. ನಿತ್ಯವೂ ಮನೆಯಲ್ಲೇ ಊಟ ಸಿದ್ಧಪಡಿಸಿ, ಮಧ್ಯಾಹ್ನ ಯಲ್ಲಮ್ಮನಗುಡ್ಡಕ್ಕೆ ಹೋಗುತ್ತಿದ್ದೆ. ಅದರಲ್ಲಿ ಬರುವ ಆದಾಯದಲ್ಲೇ ಜೀವನ ಸಾಗುತ್ತಿತ್ತು. ಈಗ ತಾಯಿ ಮನೆಯಲ್ಲಿ ವಾಸವಿದ್ದೇನೆ. ಆದಾಯವಿಲ್ಲದೆ ಬದುಕುವುದು ಹೇಗೆ ಎಂಬ ಅಳುಕು ಕಾಡುತ್ತಿದೆ. ಸರ್ಕಾರ ಅಥವಾ ಇನ್ನೊಬ್ಬರ ಬಳಿ ಸಹಾಯಹಸ್ತ ಚಾಚಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಬಸವ್ವ ಸಾಗರ.

ಲಾಕ್‌ಡೌನ್‌ನಿಂದ ಬದುಕಿಗೇ ಬೀಗ ಹಾಕಿದಂತಾಗಿದೆ

ನಾನು 20 ವರ್ಷದಿಂದ ಇಲ್ಲಿಗೆ ಬರುವ ಭಕ್ತರಿಗೆ ಹಾಗೂ ವ್ಯಾಪಾರಿಗಳಿಗೆ ಊಟ ಮಾರಾಟ ಮಾಡಿ ಕುಟುಂಬ ಸಾಗಿಸುತ್ತಿದ್ದೇನೆ. 20 ರೂಪಾಯಿಗೆ 3 ರೊಟ್ಟಿ, ಪಲ್ಯ ಮತ್ತು ಮೊಸರನ್ನು ಜನರು ಖರೀದಿಸುತ್ತಿದ್ದರು. ನಿತ್ಯವೂ 200ರಿಂದ 300 ರೂ. ಗಳಿಸಿಯೇ ಮನೆಗೆ ಮರಳುತ್ತಿದ್ದೆ. ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನಗಳಂದು ಹೆಚ್ಚಿನ ಆದಾಯ ಕೈಗೆಟುಕುತ್ತಿತ್ತು. ಯಲ್ಲಮ್ಮನ ಆಶೀರ್ವಾದದಿಂದ ಎಂದೂ ಬದುಕಿನ ಬಗ್ಗೆ ಚಿಂತಿಸಿಯೇ ಇರಲಿಲ್ಲ. ಈಗ ಲಾಕ್‌ಡೌನ್‌ನಿಂದಾಗಿ ನಮ್ಮ ಬದುಕಿಗೇ ಬೀಗ ಹಾಕಿದಂತಾಗಿದೆ. ಲಾಕ್‌ಡೌನ್ ಯಾವಾಗ ತೆರವಾಗಿ ಭಕ್ತರು ಆಗಮಿಸುತ್ತಾರೋ ಎಂದು ಕಾಯುತ್ತಿದ್ದೇನೆ ಎನ್ನುತ್ತಾರೆ ಚಿಕ್ಕುಂಬಿಯ ಕಲ್ಲವ್ವ ಬದ್ನೂರ.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಮಹಿಳೆಯರು ಆಯಾ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿ ಅಥವಾ ಗ್ರಾಮಲೆಕ್ಕಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ದಾನಿಗಳ ನೆರವಿನಿಂದ ಅವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಗುವುದು.| ಪ್ರಶಾಂತ ಪಾಟೀಲ ತಹಸೀಲ್ದಾರ್, ಸವದತ್ತಿ