ಶನಿವಾರಸಂತೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಸೋಮವಾರಪೇಟೆ ಘಟಕ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಸಮೀಪದ ವಡೆನಪುರ ಗ್ರಾಮದ ಕೃಷಿಕ ಸೋಮಶೇಖರ್ ಅವರ ಗದ್ದೆಯಲ್ಲಿ ಯಾಂತ್ರೀಕೃತ ಭತ್ತ ಬೇಸಾಯ ವಿಧಾನಗಳು ಮತ್ತು ನಾಟಿ ಯಂತ್ರ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು.
ನಾಟಿ ಯಂತ್ರಕ್ಕೆ ಸಸಿ ಮಡಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಎಪಿಎಂಸಿ ನಿರ್ದೇಶಕ ಪರಮೇಶ್, ಕಾರ್ಮಿಕರ ಕೊರತೆಯಿಂದಾಗಿ ಪ್ರಸ್ತುತ ಭತ್ತ ಬೇಸಾಯದಲ್ಲಿ ರೈತ ಖರ್ಚು ಮಾಡಿದಷ್ಟೂ ಆದಾಯ ಬರುತ್ತಿಲ್ಲ. ಈ ಕಾರಣದಿಂದ ಭತ್ತ ಬೆಳೆಯುತ್ತಿದ್ದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇದರ ಪರಿಣಾಮ ಭತ್ತದ ಗದ್ದೆಗಳು ತೋಟವಾಗಿ ಪರಿವರ್ತನೆಯಾಗುತ್ತಿದೆ. ಈ ದಿಸೆಯಲ್ಲಿ ನಾಟಿ ಯಂತ್ರ ಬಳಸಿಕೊಂಡು ಭತ್ತ ಬೇಸಾಯ ಮಾಡಿದರೆ ಕಡಿಮೆ ಖರ್ಚಿನಲ್ಲಿ ಭತ್ತ ಕೃಷಿ ಮಾಡಲು ಸಾಧ್ಯ. ಇದರೊಂದಿಗೆ ಕಾರ್ಮಿಕರ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಕವಿತಾ ಮಾಹಿತಿ ನೀಡಿದರು. ಬಳಿಕ ರೈತರಿಗೆ ನಾಟಿ ಯಂತ್ರದ ಬಳಕೆ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಯಂತ್ರಧಾರೆ ವ್ಯವಸ್ಥಾಪಕ ಸಕೇತ್, ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕಿ ವೇದಪ್ರಿಯಾ, ಬಾಂಧವ್ಯ ವಲಯ ಮೇಲ್ವಿಚಾರಕ ಜಯಶ್ರೀ, ಕೃಷಿ ಮೇಲ್ವಿಚಾರಕ ಹರೀಶ್‌ಕುಮಾರ್ ಇತರರಿದ್ದರು.