ಜಿಲ್ಲೆ

ಬಡವರು ನೆಮ್ಮದಿಯಿಂದ ಇರುವುದಷ್ಟೇ ಮುಖ್ಯ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಅಧಿಕಾರಕ್ಕೆ ಬರುವ ಮುನ್ನ ನಾವು ನೀಡಿದ ಭರವಸೆಯಂತೆ ಎಲ್ಲ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ನಮಗೆ ಬಡವರು ನೆಮ್ಮದಿ, ಸಂತೋಷದಿಂದ ಇರುವುದಷ್ಟೇ ಮುಖ್ಯ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ ಗುತ್ತಲು ಬಡಾವಣೆಯಲ್ಲಿ ಆಯೋಜಿಸಿದ್ದ ಫಲಾನುಭವಿಗಳಿಗೆ 10 ಕೆ.ಜಿ ಅಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಯಾರೊಬ್ಬರೂ ಹಸಿವಿನಿಂದ ಇರಬಾರದೆನ್ನುವ ಕಾರಣಕ್ಕೆ ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ ಅಕ್ಕಿ ನೀಡುವುದಾಗಿ ನಮ್ಮ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಅಕ್ಕಿ ಕೊಡದ ಹಿನ್ನೆಲೆಯಲ್ಲಿ ಐದು ಕೆ.ಜಿ ಅಕ್ಕಿ ಹಾಗೂ ಇನ್ನೈದು ಕೆ.ಜಿ ಅಕ್ಕಿಗೆ ಬದಲಿಗೆ ಹಣವನ್ನು ನೀಡಲಾಗುತ್ತಿತ್ತು. ಆದರೀಗ ಹತ್ತು ಕೆ.ಜಿ ಅಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

ನಮ್ಮ ಸರ್ಕಾರಕ್ಕೆ ಬಡವರು ನೆಮ್ಮದಿಯಿಂದ ಇರಬೇಕೆನ್ನುವುದು ಮುಖ್ಯ. ಈ ಕಾರಣಕ್ಕೆ ಹತ್ತು ಕೆ.ಜಿ ಅಕ್ಕಿ ಕೊಡುವ ನಿರ್ಧಾರ ಮಾಡಲಾಯಿತು. ಇದಲ್ಲದೆ ಪಂಚ ಗ್ಯಾರಂಟಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಸರ್ಕಾರ ನಮ್ಮದು. ಪ್ರತಿ ತಿಂಗಳು ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರೂ, ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ, ವಿದ್ಯುತ್ ಉಚಿತ ಯೋಜನೆಯಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. ರಾಜ್ಯಸರ್ಕಾರಕ್ಕೆ ಆರ್ಥಿಕ ಹೊರೆಯಾದರೂ, ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಹೇಳಿದರು.

ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್, ತಾಪಂ ಇಒ ವೀಣಾ, ನಗರಸಭೆ ಸದಸ್ಯೆ ಸೌಭಾಗ್ಯ, ಮುಡಾ ಅಧ್ಯಕ್ಷ ನಯೀಂ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರುದ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಇತರರಿದ್ದರು.