ತೇರದಾಳ (ಗ್ರಾ): ಬಸವಣ್ಣನವರು ಕೇವಲ ನಮ್ಮ ನಾಡಿಗಷ್ಟೆ ಅಲ್ಲ ಇಡಿ ವಿಶ್ವಕ್ಕೆ ಅಣ್ಣನಾಗಿ ಹೊರ ಹೊಮ್ಮಿದ್ದಾರೆ. ಅವರ ಸರಳ ಸಂದೇಶಗಳನ್ನು ನಾವು ಅರಿತುಕೊಂಡು ಜೀವನ ಮಾಡಬೇಕಾದ ಅವಶ್ಯಕತೆ ಇದೆ. ನಾವು ಯಾರು ಇಲ್ಲಿ ಶಾಶ್ವತವಾಗಿ ಇರಲು ಬಂದಿಲ್ಲ. ಆದರೆ, ಹೋಗುವುದರೊಳಗಾಗಿ ಈ ಸಮಾಜಕ್ಕೆ ಒಳ್ಳೆಯ ಕೊಡುಗೆ ಕೊಟ್ಟುಹೋಗಬೇಕು. ಕಾಯಕದಿಂದಲೇ ಕೈಲಾಸ ಕಾಣಬಹುದು ಎಂದು ಹೇಳಿದ ಕ್ರಾಂತಿಯೋಗಿ ಬಸವಣ್ಣನವರು ಇಡಿ ಜಗತ್ತಿಗೆ ದಾರಿದೀಪವಾಗಿದ್ದಾರೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರವಿರುವ ಬಸವಣ್ಣವರ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ನಾಯಕನೆನಿಸಿಕೊಂಡ ಬಸವಣ್ಣನವರು ಸಂಸ್ಕಾರಯುತ ಸುಂದರ ಸಮಾಜ ಕಟ್ಟಲು ಹಗಲಿರುಳು ಶ್ರಮಿಸಿದರು. ನಮ್ಮ ಬದುಕು ಅರಳಲಿ, ಪರಸ್ಪರರಲ್ಲಿ ಸಾಮರಸ್ಯ ಮೂಡಲಿ ಎನ್ನುವ ಕಾರಣಕ್ಕಾಗಿ ಸಾವಿರಾರು ವಚನಗಳನ್ನು ಬರೆದಿದ್ದಾರೆ ಎಂದರು.
ತೇರದಾಳ ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಪಟ್ಟಣದ ಪ್ರಮುಖರಾದ ರಾಮಣ್ಣ ಹಿಡಕಲ್, ಪರಸಪ್ಪ ಮಾಸ್ತಿ, ನಿಂಗಪ್ಪ ಮಾಲಗಾವಿ, ಬುಜಬಲಿ ಕೆಂಗಾಲಿ, ಶಂಕರ ಕುಂಬಾರ, ಅಲ್ಲಪ್ಪ ಮದಲಮಟ್ಟಿ, ಬಸು ಲಕ್ಕಪ್ಪಗೋಳ, ಸಿದ್ದಪ್ಪ ಉಳಗೊಂಡ, ರಮೇಶ ಪಟ್ಟಣಶೆಟ್ಟಿ, ಸಂತೋಷ ಜಮಖಂಡಿ ಹಿರೇಮಠ, ಬಸವರಾಜ ಲಕ್ಕಪ್ಪಗೋಳ, ಸತ್ತೆಪ್ಪ ಮಹೇಶವಾಡಗಿ, ಸಂತೋಷ ಜಮಖಂಡಿ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಗ್ರಾಮ ಆಡಳಿತ ಅಧಿಕಾರಿ ಆರ್.ಕಮತೆ, ಪ್ರತಾಪ ಕೊಡುಗೆ, ಚಂದ್ರಶೇಖರ ಖವಾಸಿ ಮತ್ತಿತರರಿದ್ದರು.