ರಾಯಚೂರಿನ ಬಸವ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಶರಣ ಮಹೋತ್ಸವ ಕಾರ್ಯಕ್ರಮದಲ್ಲಿ ವಚನ ಅಧ್ಯಯನ ವೇದಿಕೆ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಮಾತನಾಡಿದರು. ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು, ಜೆ.ಬಸವರಾಜ ಇದ್ದರು. 
ಜಿಲ್ಲೆ

ಶರಣರನ್ನು ಮೀರಿ ವಚನಕಾರ್ತಿಯರಿಂದ ಕ್ರಾಂತಿ

ರಾಚಯ್ಯ ಸ್ವಾಮಿ

ರಾಯಚೂರು: ಹನ್ನೆರಡನೇ ಶತಮಾನದಲ್ಲಿ ವಚನಕಾರರಂತೆ ನೂರಾರು ವಚನಕಾರ್ತಿಯರು ಕೂಡಾ ಕ್ರಾಂತಿ ಮಾಡಿದ್ದು, ಅನೇಕ ವಚನಕಾರ್ತಿಯರು ಅಲಕ್ಷಕ್ಕೆ ಒಳಗಾಗಿದ್ದಾರೆ ಎಮದು ವಚನ ಅಧ್ಯಯನ ವೇದಿಕೆ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಹೇಳಿದರು.
ನಗರದ ಬಸವ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಶರಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರು ಪುರುಷರ ಜತೆಗೆ ಮಹಿಳೆಯರಿಗೂ ಕೂಡಾ ಸಮಾನ ಅವಕಾಶ ನೀಡಿದ್ದರು. ಹೀಗಾಗಿ ಅನೇಕ ಮಹಿಳೆಯರು ವಚನಗಳ ರಚನೆಯಲ್ಲಿ ತೊಡಗಿದ್ದರು ಎಂದರು.
ವಚನಕಾರ್ತಿಯಲ್ಲಿ ಅಕ್ಕಮಹಾದೇವಿ, ಗಂಗಾಬಿಕೆ, ನೀಲಾಂಬಿಕೆ, ಅಕ್ಕನಾಗಮ್ಮ ವಚನ ರಚನೆಯಲ್ಲಿ ಮುಂಚೂಣಿಯಲ್ಲಿದ್ದರೆ, ಎಷ್ಟೋ ವಚನಕಾರ್ತಿಯರ ಹೆಸರುಗಳನ್ನು ನಾವು ಕೇಳಿಲ್ಲ. ಅವರ ವಚನಗಳ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ ಎಂದು ಹೇಳಿದರು.
ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಮಾತನಾಡಿ, ನಾವೆಲ್ಲರೂ ಶರಣರ ಪಥದಲ್ಲಿ ನಡೆದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗಲಿದೆ. ಇಂದಿನ ಯುವ ಪೀಳಿಗೆಗೆ ಬಸವ ತತ್ತ್ವ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನೀಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರ, ಬಸವ ಕೇಂದ್ರದ ಪದಾಕಾರಿಗಳಾದ ಜೆ.ಬಸವರಾಜ, ಮಹಾದೇವಪ್ಪ ಏಗನೂರು, ಡಾ.ಶಿವಕುಮಾರ ಮಾಟೂರ್, ಜಯಶ್ರೀ ಮಹಾಜನಶೆಟ್ಟಿ, ಪಾರ್ವತಿ ಉಪಸ್ಥಿತರಿದ್ದರು.