ವಿಜಯವಾಣಿ ಸುದ್ದಿಜಾಲ ಕಡಬ
ಬೇಸಿಗೆಯಲ್ಲಿ ರಾಜ್ಯದ ಬಯಲುಸೀಮೆಗೆ ಸೀಮಿತವಾಗಿದ್ದ ಜಲಕ್ಷಾಮ ಕೆಲ ವರ್ಷಗಳಿಂದ ಕರಾವಳಿಗೂ ತಟ್ಟಿದೆ. ಈ ಹಿನ್ನೆಲೆಯಲ್ಲಿ ನೀರಿನ ಮೂಲ ಸಂರಕ್ಷಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಇದರ ಭಾಗವಾಗಿ ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರಾತನ ಅಮೈ ಕೆರೆ ಪುನಶ್ಚೇತನದಿಂದ ಸರ್ವಋತು ನೀರಿನ ಸೆಲೆಯಾಗಿ ಪರಿವರ್ತನೆಯಾಗಿದೆ. ಸುತ್ತಮತ್ತಲಿನ ನೀರಿನ ಬವಣೆ ನೀಗಿಸಿದೆ. ಪ್ರಸಕ್ತ ಉರಿ ಬಿಸಿಲಿದ್ದರೂ ಕೆರೆಯಲ್ಲಿ ಸ್ವಚ್ಛ, ಸಮೃದ್ಧ ನೀರು ನಳನಳಿಸುತ್ತಿದೆ.
ಪುರಾತನವಾಗಿರುವ ಅಮೈ ಕೆರೆ ಈ ಹಿಂದೆ ಬೇಸಿಗೆ ಕಾಲದಲ್ಲೂ ನೀರು ತುಂಬಿಕೊಂಡಿತ್ತು. ಗುಡ್ಡಕ್ಕೆ ಮೇಯಲು ಬರುವ ಜಾನುವಾರುಗಳಿಗಳ, ಕಾಡುಪ್ರಾಣಿಗಳ, ಬಾಯಾರಿಕೆ ಕೆರೆ ನೀಗಿಸುತ್ತಿತ್ತು. ಸುತ್ತಮುತ್ತಲಿನ ಜನರ ಕುಡಿಯುವ ನೀರಿನ ಉಪಯೋಗದ ಕೆರೆಯಾಗಿತ್ತು. ಕಾಲಕ್ರಮೇಣ ಕೆರೆಯಲ್ಲಿ ಹೂಳು ತುಂಬಿಕೊಂಡು ಆಳ ಕಡಿಮೆಯಾಗಿ ನೀರು ನಿಲ್ಲುತ್ತಿರಲಿಲ್ಲ. ಕೊನೆಗೆ ಮೈದಾನದಂತಾಗಿತ್ತು. ಅಮೈ ಪರಿಸರದಲ್ಲಿ ನೀರಿನ ಕ್ಷಾಮ ಉಂಟಾದಾಗ ಅಂದಿನ ರಾಮಕುಂಜ ಗ್ರಾ.ಪಂ ಅಧ್ಯಕ್ಷ ಪ್ರಶಾಂತ್ ಆರ್.ಕೆ.ಕೆರೆ ಅಭಿವೃದ್ಧಿಯ ಆಲೋಚನೆಗೆ ಮುಂದಾದರು. ಬಳಿಕ 2017ರಲ್ಲಿ ಕೆರೆಯ ಅಭಿವೃದ್ಧಿಯ ಯೋಜನೆಗೆ ಅಡಿಪಾಯ ಹಾಕಲಾಯಿತು. ಅಂದಿನಿಂದ ಇಂದಿನವರೆಗೂ ಬಿರು ಬೇಸಿಗೆಯಲ್ಲೂ ನೀರಿನ ಬವಣೆಯನ್ನು ಹೋಗಲಾಡಿಸುವ ಜಲಮೂಲವಾಗಿ ಪರಿವರ್ತನೆಯಾಗಿದೆ.
ಕೆರೆ ಅಭಿವೃದ್ಧಿ ಸಹಭಾಗಿತ್ವ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ 5 ಲಕ್ಷ ರೂ., ಸಣ್ಣ ನೀರಾವರಿ ಇಲಾಖೆಯಿಂದ 20 ಲಕ್ಷ ರೂ., ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 25 ಲಕ್ಷ ರೂ. ಹಾಗೂ ಸಾರ್ವಜನಿಕರ ಆರ್ಥಿಕ ಸಹಕಾರದಿಂದ ಅಭಿವೃದ್ಧಿ ಪಡಿಸಲಾಗಿತ್ತು.
ಸುಮಾರು 80 ಸೆಂಟ್ಸ್ ಜಾಗದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಲಾಗಿದೆ. ಕೆರೆಯ ಸುತ್ತ ಬೇಲಿ ನಿರ್ಮಿಸಲಾಗಿದೆ. ಕೆರೆಯಲ್ಲಿ ಮೀನು ಸಾಕಾಣೆ ಮಾಡಲಾಗುತ್ತಿದೆ. ನೀರು ಇಂಗಿಸುವ ಸಲುವಾಗಿ ಕೆರೆಯ ಸುತ್ತ ಜಲ್ಲಿಕಲ್ಲುಗಳನ್ನು ಹಾಕಲಾಗಿದೆ. ಕೆರೆಯ ಒಂದು ಭಾಗದಲ್ಲಿ ಸಣ್ಣದಾದ ಉದ್ಯಾನವನ ನಿರ್ಮಿಸಲಾಗಿದೆ. ಕುಳಿತುಕೊಳ್ಳಲು ಅಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಅಮೈ ಪರಿಸರದ ಜನರಿಗೆ ಒಂದು ಕಾಲದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ನೀರಿನ ಬರ ಎದುರಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಿದ ಉದಾಹರಣೆಗಳಿವೆ. ಆದರೆ ಕೆರೆ ಅಭಿವೃದ್ಧಿಯ ಬಳಿಕ ಪರಿಸರದ ಸುಮಾರು 200 ಕ್ಕೂ ಹೆಚ್ಚು ಮನೆಗಳ ಕುಡಿಯುವ ನೀರಿನ ಬವಣೆ ನೀಗಿದೆ. ಕೃಷಿ ಮತ್ತಿತರ ಉಪಯೋಗದಲ್ಲಿರುವ ಕೊಳವೆಬಾವಿ, ತೆರೆದ ಬಾವಿಗಳಲ್ಲಿ ನೀರು ಇಂದಿಗೂ ಬತ್ತಿಲ್ಲ. ಕೆರೆ ಅಭಿವೃದ್ಧಿ ಪಡಿಸಿ ಭವಿಷ್ಯದಲ್ಲಿ ಈ ಭಾಗದ ನೀರಿನ ಕೊರತೆ ನೀಗಿಸುವ ಗ್ರಾ.ಪಂ ಕನಸು ನನಸಾಗಿದೆ. ಅಮೈ ಕೆರೆಯ ಅಭಿವೃದ್ಧಿ ಯಶೋಗಾಥೆ ನಾಡಿನೆಲ್ಲೆಡೆ ಕೆರೆಗಳ ಅಭಿವೃದ್ಧಿಗೆ ಪ್ರೇರಣೆಯಾಗಿದೆ.
ಅಮೈ ಕೆರೆ ಅಭಿವೃದ್ಧಿಯ ಸಾಕ್ಷೃಚಿತ್ರ ಬೆಂಗಳೂರಿನಲ್ಲಿ ನಡೆದ ಸಂಸದರ ಸಭೆಯಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜಲ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಉಂಟಾದಾಗ ಇಂತಹ ಕೆಲಸಗಳು ನಡೆಸಲು ಸಾಧ್ಯ. ಪ್ರತಿ ಗ್ರಾಮದಲ್ಲಿ ಪ್ರಾಕೃತಿಕ ಕೆರೆಗಳ ಅಭಿವೃದ್ಧಿಯಾದರೆ ನೀರಿನ ಬವಣೆ ನೀಗಿಸಬಹುದು.- ಚೆನ್ನಪ್ಪ ಗೌಡ ಕಜೆಮೂಲೆ, ಸಹಾಯಕ ನಿರ್ದೇಶಕ, ಉದ್ಯೋಗ ಖಾತರಿ ಯೋಜನೆ, ಕಡಬ ತಾಪಂ
ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾ.ಪಂ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ರಾಜ್ಯಾದ್ಯಾಂತ 1600 ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸಲಾಗಿದೆ. ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ 28 ಕೆರೆಗಳನ್ನು ನಮ್ಮೂರು ನಮ್ಮ ಕೆರೆ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಕಡಬ ತಾಲೂಕಿನಲ್ಲಿ ರಾಮಕುಂಜದ ಅಮೈ ಕೆರೆ, ಸವಣೂರಿನ ಕೊಂಬಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊಟ್ಟುಕೆರೆಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ.- ಮೇದಪ್ಪ ಗೌಡ ನಾವೂರು, ಕಡಬ ತಾಲೂಕು ಯೋಜನಾಧಿಕಾರಿ, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ