ಮಂಡ್ಯ: ತಾಯಿ ಹಾಲು ಕೊರತೆಯುಳ್ಳ ಮಕ್ಕಳಿಗೆ ಬೇರೆ ತಾಯಂದಿರಿಂದ ಸುರಕ್ಷಿತವಾಗಿ ಸಂಗ್ರಹಿಸಲ್ಪಟ್ಟ ಹಾಲನ್ನು ನೀಡುವುದರಿಂದ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ತಾಯಿ ಹಾಲಿನ ಬ್ಯಾಂಕ್ ಸ್ಥಾಪನೆಗೆ ಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.
ನಗರದಲ್ಲಿರುವ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಮಿಮ್ಸ್‌ನಲ್ಲಿ ತಾಯಿ ಹಾಲಿನ ಬ್ಯಾಂಕ್ ಮತ್ತು ಪ್ರಸೂತಿ ತಜ್ಞರ ನೇತೃತ್ವದಲ್ಲಿ ಆರೈಕೆ ಘಟಕ ಸ್ಥಾಪಿಸಲು ಸೂಕ್ತವಾದ ಸ್ಥಳ ಲಭ್ಯವಿರುವ ಬಗ್ಗೆ ಹಾಗೂ ಜತೆಗೆ ಈ ಸ್ಥಳವು ಪಾರಂಪರಿಕ ಕಟ್ಟಡವಾಗಿರುವುದರಿಂದ ಯಾವುದೇ ಹಾನಿಯಾಗದಂತೆ ತಾಯಿ ಹಾಲಿನ ಬ್ಯಾಂಕ್ ಮತ್ತು ಆರೈಕೆ ಘಟಕ ಸ್ಥಾಪಿಸಲು ಪರಿಶೀಲನೆ ನಡೆಸಲಾಗಿದೆ ಎಂದರು.
ತಾಯಿ ಹಾಲಿನ ಬ್ಯಾಂಕ್ ಸಮಾಲೋಚನಾ ಕೊಠಡಿ, ಶುಶ್ರೂಷಕಿಯರ ಕೊಠಡಿ, ಸ್ಟೆರಲೈಜ್ ಏರಿಯಾ, ಎಕ್ಸ್‌ಪ್ರೆಷನ್ ಕೊಠಡಿ, ನವಜಾತ ಶಿಶುಗಳ ನಿಗಾ ಘಟಕ, ಡೀಪ್ ಪ್ರೀಜರ್, ಮಿಲ್ಕ್ ಅನಲೈಜರ್, ಬಯೋ ಮೆಡಿಕಲ್ ವೇಸ್ಟ್ ಘಟಕ, ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಶೌಚಗೃಹವನ್ನು ಒಳಗೊಂಡಿರುತ್ತದೆ. ಆರೈಕೆ ಘಟಕದಲ್ಲಿ ಕಡಿಮೆ ಅಪಾಯವಿರುವವರಿಗೆ ಸ್ವಾಭಾವಿಕವಾಗಿ ಹೆರಿಗೆ ಮಾಡಿಸಲು ಅಗತ್ಯವಿರುವ ವಾರ್ಡ್, ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಶೌಚಗೃಹ, ವ್ಯಾಯಾಮ ಮಾಡಲು ಅಗತ್ಯ ಪರಿಕರ ಸೇರಿದಂತೆ ಇನ್ನಿತರೆ ಘಟಕಗಳನ್ನು ಒಳಗೊಂಡಿರಲಿದೆ ಎಂದು ಹೇಳಿದರು.
ಶಿಶು ಮರಣ ಪ್ರಮಾಣ ಮತ್ತು ತಾಯಿ ಮರಣ ಪ್ರಮಾಣವನ್ನು ತಡೆಗಟ್ಟಲು ತಾಯಿ ಹಾಲಿನ ಬ್ಯಾಂಕ್ ಮತ್ತು ಆರೈಕೆ ಘಟಕಗಳು ಅತ್ಯಗತ್ಯವಾಗಿದೆ. ತಾಯಿ ಹಾಲು ದೊರೆಯದ ನವಜಾತ ಶಿಶುಗಳಿಗೆ ಸಂಗ್ರಹಿಸಿದ ಹಾಲು ಪೂರೈಸುವುದರಿಂದ ಮಕ್ಕಳ ಜೀವ ಉಳಿಸಬಹುದಾಗಿದೆ. ಕಡಿಮೆ ಅಪಾಯವಿರುವ ಹೆರಿಗೆಗಳನ್ನು ಪ್ರತ್ಯೇಕಗೊಳಿಸಿ ಹೆಚ್ಚು ಅಪಾಯವಿರುವ ಹೆರಿಗೆಗಳ ಬಗ್ಗೆ ತೀವ್ರ ನಿಗಾ ಇಡುವುದರಿಂದ ತಾಯಿ ಮರಣ ಪ್ರಮಾಣವನ್ನು ತಗ್ಗಿಸುವ ಮೂಲಕ ಸ್ವಾಭಾವಿಕ ಹೆರಿಗೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ಆರ್.ಮನೋಹರ್, ಶಿಶು ವೈದ್ಯ ಡಾ.ಚೇತನ್, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ನಾಗರಾಜು ಸೇರಿದಂತೆ ಇತರರು ಹಾಜರಿದ್ದರು.