ವಿಜಯವಾಣಿ ಸುದ್ದಿಜಾಲ ಧಾರವಾಡ
ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಜಿಲ್ಲೆಯನ್ನು ಮಾದಕವಸ್ತು ಮುಕ್ತ ಜಿಲ್ಲೆಯಾಗಿ ಮಾಡಲು ಕ್ರಮ ವಹಿಸಲಾಗುವುದು. ಶಾಲಾ- ಕಾಲೇಜುಗಳಲ್ಲಿ ನಿರಂತರ ಜಾಗೃತಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜಿಲ್ಲಾಽಕಾರಿ ದಿವ್ಯ ಪ್ರಭು ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಾದಕವಸ್ತು ನಿಯಂತ್ರಣ ಹಾಗೂ ನಿರ್ಮೂಲನೆ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಮಾದಕವಸ್ತುಗಳ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ ತಿಳಿವಳಿಕೆ ಮೂಡಿಸಬೇಕು. ಮಾದಕವಸ್ತುಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ. ಸಂಬ0ಧಪಟ್ಟ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯಕ್ರಮ ರೂಪಿಸಬೇಕು. ಶಾಲಾ- ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ, ಕಿರುನಾಟಕ, ಏಕಪಾತ್ರಾಭಿನಯ ಹಮ್ಮಿಕೊಳ್ಳುವ ಮೂಲಕ ಅಭಿಯಾನ ಮಾಡಬೇಕು. ಜಿಲ್ಲಾ ಪೊಲೀಸ್ ಹಾಗೂ ಪೊಲೀಸ್ ಆಯುಕ್ತಾಲಯ, ಶಿಕ್ಷಣ, ಆರೋಗ್ಯ ಇಲಾಖೆಗಳ ಜತೆ ಚರ್ಚಿಸಿ, ಯೋಜನೆ ರೂಪಿಸಿಬೇಕು. ಯಶಸ್ವಿಯಾಗಿ ಸಂಘಟಿಸುವ ಶಿಕ್ಷಣ ಸಂಸ್ಥೆ, ಕಾಲೇಜುಗಳಿಗೆ ಪ್ರಶಂಸಾ ಪತ್ರ ನೀಡಿ ಅಭಿನಂದಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅಂಚೆ ಕಚೇರಿಗೆ ಭೇಟಿ ನೀಡಿ ಪಾರ್ಸಲ್, ಸಂಶಯಾಸ್ಪದ ಕೋರಿಯರ್, ಪೋಸ್ಟ್ಗಳು ಮತ್ತು ಅತಿ ಹೆಚ್ಚು ಪೋಸ್ಟ್, ಪಾರ್ಸಲ್ ಬರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಶೀಲಿಸಲು ಸೂಚಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಮಾದಕವಸ್ತು, ಕಳ್ಳಬಟ್ಟಿ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ದೊಡ್ಡ ಗ್ರಾಮಗಳು ಮತ್ತು ಕಾಲೇಜುಗಳಲ್ಲಿ ಡ್ರಗ್ಸ್ ಕುರಿತು ತಿಳಿವಳಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಡಿವೈಎಸ್‌ಪಿ ಶಿವಾನಂದ ಕಟಗಿ, ಡಿಡಿಪಿಐ ಎಸ್.ಎಸ್. ಕೆಳದಿಮಠ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.