ಜಿಲ್ಲೆ

ಉಪ್ಪಿನಂಗಡಿ ದೇಗುಲ ಸಮಗ್ರ ಅಭಿವೃದ್ಧಿ: ಶಾಸಕ ಅಶೋಕ್ ರೈ ಮಾಹಿತಿ

ಸೌಮ್ಯ ಆರ್

ಉಪ್ಪಿನಂಗಡಿ: ಸಂಗಮ ಕ್ಷೇತ್ರವಾದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯವನ್ನು ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದಿಂದ 352 ಕೋಟಿ ರೂ.ನ ಯೋಜನೆಗೆ ಮಂಜೂರಾತಿ ದೊರೆತ್ತಿದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟು ನಿರ್ಮಾಣ ಮತ್ತು ನದಿ ಗರ್ಭದಲ್ಲಿರುವ ಉದ್ಭವ ಲಿಂಗದ ಸರ್ವಕಾಲದ ದರ್ಶನಕ್ಕೆ ಕೂಡಲ ಸಂಗಮದಲ್ಲಿರುವಂತೆ ವ್ಯವಸ್ಥೆ ಸೇರಿ ಪ್ರವಾಸೋದ್ಯಮ ಕ್ಷೇತ್ರವಾಗಿ ಪರಿವರ್ತಿಸಲು ತ್ವರಿತ ಕಾರ್ಯಾರಂಭವಾಗಲಿದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ತಿಳಿಸಿದರು.

ಈ ಯೋಜನೆಗೆ ಸಂಬಂಧಿಸಿ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲು ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಇಂಜಿನಿಯರ್‌ಗಳು ಹಾಗೂ ಸರ್ಕಾರದ ಅಧಿಕಾರಿಗಳೊಂದಿಗೆ ಶನಿವಾರ ದೇವಾಲಯದ ಬಳಿ ಸಮಾಲೋಚನೆ ಹಾಗೂ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಇಂಜಿನಿಯರ್‌ಗಳು ಸಮಗ್ರ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಅದು ಮಂಜೂರಾತಿಗೊಂಡು 34 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಮಳೆಗಾಲದಲ್ಲಿ ನದಿಯಲ್ಲಿ ನೀರಿರುವ ಸಂದರ್ಭ ಈ ಕಾಮಗಾರಿ ನಡೆಸಲು ಅಸಾಧ್ಯವಾದ್ದರಿಂದ ನೀರು ಕಡಿಮೆಯಾದ ಕೂಡಲೇ ಕಾಮಗಾರಿ ಆರಂಭಿಸಿ ಮುಂದಿನ ಮಳೆಗಾಲಕ್ಕೆ ಮೊದಲು ಕಾಮಗಾರಿ ಮುಗಿಸುವ ಯೋಜನೆಯಿದೆ ಎಂದರು.

ಬೃಹತ್ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಪ್ರಮೋದ್ ಶೆಟ್ಟಿ, ವಿಶ್ವೇಶ್ವರಯ್ಯ ಜಲ ನಿಗಮದ ಕನ್ಸಲ್ಟೆಂಟ್ ಮುಖ್ಯಸ್ಥ ಸಂದೀಪ್ ನಾಡಿಗೇರ್ ಮತ್ತು ತಂಡದ ಸದಸ್ಯರಾದ ಕಿರಣ್, ದರ್ಶನ್, ಸೆಬಾಸ್ಟಿಯನ್, ಉಪತಹಸೀಲ್ದಾರ್ ಚೆನ್ನಪ್ಪ ಗೌಡ, ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್, ಸದಸ್ಯರಾದ ಎ.ಕೃಷ್ಣ ರಾವ್ ಅರ್ತಿಲ, ದೇವದಾಸ್ ರೈ, ವೆಂಕಪ್ಪ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು, ಯು.ಟಿ.ತೌಸೀಫ್, ಆದಂ ಕೊಪ್ಪಳ, ದೇವಾಲಯ ಸಿಬ್ಬಂದಿ ಕಷ್ಣಪ್ರಸಾದ್ ಬಡಿಲ, ದಿವಾಕರ ಗೌಡ, ಕೃಷ್ಣಪ್ರಸಾದ್ ದೇವಾಡಿಗ ಮತ್ತಿತರರಿದ್ದರು.

ಗೋಳಾಕಾರದ ಮಂದಿರ ನಿರ್ಮಾಣ

ನಿರಂತರ ಒತ್ತಡದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಜೆಟ್‌ನಲ್ಲಿ ಈ ದೇವಾಲಯದ ಸಮಗ್ರ ಅಭಿವೃದ್ಧಿಗೆ 352 ಕೋ.ರೂ. ಅನುದಾನ ನೀಡಲು ಅನುಮೋದನೆ ನೀಡಿದ್ದು, ಇದರಲ್ಲಿ ನದಿಯ ಎರಡು ದಡಗಳಿಗೆ ಸಂಪರ್ಕ ರಸ್ತೆಯಿರುವ ಅಣೆಕಟ್ಟು ನಿರ್ಮಾಣ, ನದಿ ನೀರಿನಲ್ಲಿ ಮುಳುಗಿರುವ ಉದ್ಭವ ಲಿಂಗದ ದರ್ಶನಕ್ಕೆ ಕೂಡಲ ಸಂಗಮದಲ್ಲಿರುವಂತೆ 80 ಮೀಟರ್ ವ್ಯಾಸದ ಗೋಳಾಕಾರದ ಮಂದಿರ ನಿರ್ಮಿಸಿ ಉದ್ಭವ ಲಿಂಗದ ಬಳಿ ತೆರಳಿ ಪೂಜೆ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ನದಿ ತಟದಲ್ಲಿ ಪಿಂಡ ಪ್ರಧಾನಕ್ಕೆ ಸಭಾಂಗಣ ನಿರ್ಮಾಣ, ವಸತಿ ವ್ಯವಸ್ಥೆಗೆ 60 ಕೊಠಡಿಗಳ ಕಟ್ಟಡ ನಿರ್ಮಾಣ, ಪಿಂಡ ಪ್ರಧಾನಕ್ಕೆ ಬಂದವರಿಗೆ ಸ್ನಾನ ಮಾಡಲು ರ‌್ಯಾಂಪ್ ನಿರ್ಮಾಣ ಮಾಡಲಾಗುವುದು ಹಾಗೂ ದೇವಾಲಯದಿಂದ ಬಸ್ ನಿಲ್ದಾಣದವರೆಗೆ ನದಿ ಬದಿಯಲ್ಲಿ ತಡೆಗೋಡೆ ನಿರ್ಮಿಸಿ ನದಿ ಬದಿಯಲ್ಲಿ 20 ಫೀಟ್‌ನ ರಸ್ತೆ ನಿರ್ಮಾಣ, ನದಿಯ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ, ವಿಶೇಷ ವಿದ್ಯುತ್ ದೀಪಾಲಂಕಾರ, ಮ್ಯೂಸಿಕ್ ಕಾರಂಜಿ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಲಾಗುವುದು. ಒಟ್ಟಿನಲ್ಲಿ ಉಪ್ಪಿನಂಗಡಿಯನ್ನು ಧಾರ್ಮಿಕ ಟೂರಿಸಂಗೆ ಪೂರಕವಾಗಿ ಅಭಿವೃದ್ಧಿ ಪಡಿಸಲಾಗುವುದು. ಅಶೋಕ್ ಕುಮಾರ್ ರೈ ಶಾಸಕ