ಜಿಲ್ಲೆ

ವರ್ಗಾವಣೆ ಪ್ರಮಾಣ ಪತ್ರ ಪರಿಶೀಲನೆಗೆ ಮಂಡಳಿ

ಪಂಕಜ ಕೆ.ಎಂ.

ಬೆಂಗಳೂರು: ವರ್ಗಾವಣೆ ಕೋರುವವರಿಗೆ ಜಿಲ್ಲಾ ಆರೋಗ್ಯ ಮಂಡಳಿ ನೀಡುವ ಪ್ರಮಾಣ ಪತ್ರ ಪರಿಶೀಲಿಸಲು ರಾಜ್ಯ ಆರೋಗ್ಯ ಮಂಡಳಿ ರಚಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಗಂಭೀರ ಆರೋಗ್ಯ ಸಮಸ್ಯೆ, ಮಾರಣಾಂತಿಕ ಕಾಯಿಲೆ ಹೊಂದಿರುವ ವೈದ್ಯಾಧಿಕಾರಿ, ಸಿಬ್ಬಂದಿ ಹಾಗೂ ಅವರ ಸಂಗಾತಿ ಇಲ್ಲವೆ ಅವಲಂಬಿತರಿಗೆ ಕೆಲಸ ಮಾಡುವ ಸ್ಥಳದಲ್ಲಿ ಸೂಕ್ತ ವೈದ್ಯೋಪಚಾರ ಪಡೆಯಲು ಸಾಧ್ಯವಿಲ್ಲದಿದ್ದಾಗ ವರ್ಗಾವಣೆಗೆ ಅವಕಾಶ ಇರುತ್ತದೆ. ಅಂತಹ ಸಂದರ್ಭದಲ್ಲಿ ಸಮಸ್ಯೆಯನ್ನು ಖಾತ್ರಿಪಡಿಸಿಕೊಂಡು ವರ್ಗಾವಣೆಗೆ ಪ್ರಮಾಣ ಪತ್ರ ನೀಡಲು ಜಿಲ್ಲಾ ಆರೋಗ್ಯ ಮಂಡಳಿಗೆ ತಿಳಿಸಿದೆ.

ಆದಾಗ್ಯೂ ಅವಶ್ಯಕ ಸಂದರ್ಭಗಳಲ್ಲಿ ಜಿಲ್ಲಾ ಆರೋಗ್ಯ ಮಂಡಳಿಯು ನೀಡಿದಂತಹ ಪ್ರಮಾಣ ಪತ್ರ ನಿಯಮಾನುಸಾರ ಇದೆಯೇ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಲು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ರಾಜ್ಯ ಆರೋಗ್ಯ ಮಂಡಳಿ ರಚಿಸಲಾಗಿದೆ. ಈ ಮಂಡಳಿಯು ವರ್ಗಾವಣೆ ಅಥವಾ ವೈದ್ಯಕೀಯ ರಜೆ ಪ್ರಕರಣಗಳಲ್ಲಿ ಆದ್ಯತೆ ಮೇರೆಗೆ ಪರಿಶೀಲಿಸಿ ಅನುಮತಿ ನೀಡಲಿದೆ.

ರಾಜ್ಯ ಆರೋಗ್ಯ ಮಂಡಳಿಯ ಸಭಾಪತಿಯಾಗಿ ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರನ್ನು ನೇಮಿಸಲಾಗಿದೆ. ಉಳಿದಂತೆ ಜಯನಗರ ಸಾರ್ವಜನಿಕ ಆಸ್ಪತ್ರೆ, ಸರ್ ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ ಹಾಗೂ ಕೆ.ಸಿ.ಜನರಲ್ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞರು ಮತ್ತು ಆರೋಗ್ಯ ಇಲಾಖೆ ಅಧಿಕಾರಿ ಸೇರಿ 14 ಸದಸ್ಯರನ್ನು ಮಂಡಳಿ ಒಳಗೊಂಡಿದೆ ಎಂದು ಆದೇಶದಲ್ಲಿ ತಿಳಿಸಿದೆ.