ಜಿಲ್ಲೆ

103 ಕಂದಾಯ ಗ್ರಾಮಗಳಿಗೆ ಸರ್ಕಾರ ಅಂಕಿತ ; ಅಧಿಸೂಚನೆ ಪ್ರಕಟವಾದರೆ ಅಧಿಕೃತ ಸ್ಥಾನಮಾನ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಿಯಮಾನುಸಾರ ಹೊಸದಾಗಿ ಗುರುತಿಸಿರುವ 272 ಕಂದಾಯ ಗ್ರಾಮಗಳ ಪೈಕಿ 103 ಗ್ರಾಮಗಳಿಗೆ ಸರ್ಕಾರದ ಅಂತಿಮ ಅಂಕಿತ ಬಿದ್ದಿದೆ.

ಯಾವುದೇ ಒಂದು ಜನವಸತಿ ಪ್ರದೇಶದ ಅಭಿವೃದ್ಧಿಗೆ ಅಧಿಕೃತ ಗ್ರಾಮದ ಮಾನ್ಯತೆ ಅಗತ್ಯ. ತಾಂಡಾಗಳು, ಅಲೆಮಾರಿ ಸಮುದಾಯಗಳು ನೆಲೆ ನಿಂತ ಪ್ರದೇಶಗಳು ಸೇರಿ ವಿವಿಧೆಡೆ ಜನರು ಒಂದೆಡೆ ವಾಸಿಸುತ್ತಿದ್ದರೂ ಗ್ರಾಮಗಳಾಗಿ ಕಂದಾಯ ಇಲಾಖೆ ಪಟ್ಟಿಗೆ ಸೇರಿರುವುದಿಲ್ಲ. ಇದಕ್ಕೆ ಹಲವು ವರ್ಷಗಳಿಂದಲೂ ದಾಖಲೆ ರಹಿತ ಜನವಸತಿ ಪ್ರದೇಶಗಳು ಮಜರೆ ಗ್ರಾಮಗಳಾಗಿ ಉಳಿದುಕೊಂಡಿರುತ್ತವೆ. ಇದಕ್ಕೆ ಕಂದಾಯ ಇಲಾಖೆಯ ಸರ್ವೇ ವರದಿಯ ಅನುಸಾರ ಅರ್ಹ ಪ್ರದೇಶಗಳನ್ನು ಗುರುತಿಸಿ, ಕಂದಾಯ ಗ್ರಾಮಗಳನ್ನು ಘೋಷಿಸಲಾಗುತ್ತದೆ.

ಭೂಕಂದಾಯ ಕಾಯ್ದೆಯಡಿ ಸರ್ಕಾರದ ಅಧಿಸೂಚನೆ ಪ್ರಕಟಗೊಳ್ಳುತ್ತಿದ್ದಂತೆ ಊರಿಗೆ ಅಧಿಕೃತ ಗ್ರಾಮದ ಸ್ಥಾನಮಾನ ಸಿಗುತ್ತದೆ.

ಅದರಂತೆ ಜಿಲ್ಲೆಯಲ್ಲಿ 272 ಜನವಸತಿ ಪ್ರದೇಶಗಳನ್ನು ಹೊಸ ಕಂದಾಯ ಗ್ರಾಮಗಳನ್ನಾಗಿ ಜಿಲ್ಲಾಡಳಿತ ಗುರುತಿಸಿದೆ. ಈ ಪೈಕಿ 2022ರ ಜ.11ರವರೆಗೆ ಜಿಲ್ಲೆಯ 103 ಗ್ರಾಮಗಳಿಗೆ ಕಂದಾಯ ಗ್ರಾಮಗಳ ಮುದ್ರೆ ಒತ್ತಲಾಗಿದೆ. ಇನ್ನೂ 159 ಗ್ರಾಮಗಳ ಕಡತಗಳನ್ನು ಕಂದಾಯ ಇಲಾಖೆಗೆ ಸಲ್ಲಿಸಿದ್ದು, 144 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಇವುಗಳಲ್ಲಿ 141 ಗ್ರಾಮಗಳು ಅಂತಿಮ ಅಧಿಸೂಚನೆಗೆ ಒಳಪಟ್ಟಿವೆ. ಇನ್ನೂ 113 ಜನವಸತಿ ಪ್ರದೇಶಗಳ ಪಟ್ಟಿ ತಾಲೂಕು ಕಚೇರಿಯಲ್ಲಿದ್ದು ಇವುಗಳ ಕಡತಗಳು ಭೂ ದಾಖಲೆಗಳ ಇಲಾಖೆಯಲ್ಲಿ ಪರಿಶೀಲನೆಯ ಬಳಿಕ ಮತ್ತಷ್ಟು ಊರುಗಳು ಕಂದಾಯ ಗ್ರಾಮಗಳು ಅಸ್ತಿತ್ವ ಪಡೆದುಕೊಳ್ಳಲಿವೆ.

ಪ್ರಾಥಮಿಕ ಅಧಿಸೂಚನೆಗೆ ಬಾಕಿ ಇರುವ 15 ಹಾಗೂ ಅಂತಿಮ ಅಧಿಸೂಚನೆಗೆ ಬಾಕಿ ಇರುವ 38 ಜನವಸತಿ ಪ್ರದೇಶಗಳ ಪಟ್ಟಿ ಗ್ರಾಮೀಣಾಭಿವೃದ್ಧಿ ಇಲಾಖೆ ಬಳಿ ಇದೆ. ಜಿಲ್ಲೆಯ ತಾಲೂಕುಗಳ ಪೈಕಿ ಬಾಗೇಪಲ್ಲಿಯಲ್ಲಿ 89 ಮತ್ತು ಗೌರಿಬಿದನೂರಿನಲ್ಲಿ 62 ಜನವಸತಿ ಪ್ರದೇಶಗಳು ಕಂದಾಯ ಗ್ರಾಮಗಳ ಪಟ್ಟಿಯಲ್ಲಿ ಸೇರಬೇಕಾಗಿವೆ.

ಕಂದಾಯ ಗ್ರಾಮ ಅನುಕೂಲ: ಕಂದಾಯ ಗ್ರಾಮಗಳಾಗಿ ರಚನೆಯಾಗುವ ಗ್ರಾಮಗಳನ್ನು ಮೂಲ ಹಾಗೂ ಹೊಸ ಗ್ರಾಮ ಎಂಬುದಾಗಿ ವಿಂಗಡಿಸಿ ಹೊಸ ನಕ್ಷೆ ತಯಾರಿಸಲಾಗುತ್ತದೆ. ಪ್ರತ್ಯೇಕ ಗ್ರಾಮನಕ್ಷೆ, ಪಹಣಿ, ಆಕಾರ್ ಬಂದ್, ಭೂ ದಾಖಲೆಗಳು ರಚನೆ ಆಗುತ್ತವೆ. ಬಳಿಕ ಆಯಾ ತಾಲೂಕು ಆಡಳಿತಗಳು ಗುರುತಿಸಿರುವ ಕಂದಾಯ ಗ್ರಾಮಗಳ ಪಟ್ಟಿ ಸೇರಬೇಕಾದ ಜನವಸತಿ ಸ್ಥಳಗಳಲ್ಲಿ ಭೂದಾಖಲೆಗಳ ಇಲಾಖೆಯಿಂದ ಸರ್ವೆ ನಡೆಸಿ ಗಡಿ ಗುರುತಿಸಲಾಗುತ್ತದೆ. ಅಂತಿಮವಾಗಿ ಸರ್ಕಾರದ ಮಟ್ಟಕ್ಕೆ ದಾಖಲೆಗಳನ್ನು ರವಾನಿಸಲಾಗುತ್ತದೆ. ಎಲ್ಲ ಪರಿಶೀಲನೆಗಳ ತರುವಾಯ ಜನವಸತಿ ಪ್ರದೇಶಗಳು ಕಂದಾಯ ಗ್ರಾಮಗಳ ಪಟ್ಟಿ ಸೇರುತ್ತವೆ. ಇದರಿಂದ ಆಯಾ ಭಾಗದ ಜನರು ಮನೆ ಮತ್ತು ಜಮೀನಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಮತ್ತು ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ.