ಮುಂಡಗೋಡ: ಇಲ್ಲಿಯ ತಹಸೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ಹಾಗೂ ಉಪತಹಸೀಲ್ದಾರ್ ಮಂಗಳವಾರ ಬೆಳಗ್ಗೆ ಸಾರ್ವಜನಿಕರ ಎದುರು ಕ್ಷುಲಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದಾರೆ.
ಕಂದಾಯ ನಿರೀಕ್ಷಕ ವಿಕ್ರಮ ಸಿಂಗ್ ರಜಪೂತ ಹಾಗೂ ಉಪತಹಸೀಲ್ದಾರ್ ಜಿ.ಬಿ. ಭಟ್ ಪರಸ್ಪರ ಹೊಡೆದಾಡಿಕೊಂಡ ಅಧಿಕಾರಿಗಳು.
ಕಂದಾಯ ಇಲಾಖೆ ಯಿಂದ ಹಲವು ಬಗೆಯ ಪ್ರಮಾಣ ಪತ್ರಗಳನ್ನು ಸಾರ್ವಜನಿಕ ರಿಗೆ ನೀಡಲಾಗುತ್ತದೆ. ಈ ಪ್ರಮಾಣ ಪತ್ರಗಳ ವಿತರಣೆಗೂ ಮುನ್ನ ಗ್ರಾಮಾಡಳಿತ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ದಾಖಲೆಗಳನ್ನು ಪರಿಶೀಲಿಸಿ ವರದಿ ಬರೆದು ತಹಸೀಲ್ದಾರ್ ಕಚೇರಿಗೆ ಕಳುಹಿಸಬೇಕು. ಆದರೆ, ಕೆಲವು ಬಾರಿ ಕಂದಾಯ ನಿರೀಕ್ಷಕ ವಿಕ್ರಮಸಿಂಗ್ ರಜಪೂತ್ ಸರಿಯಾಗಿ ಪರಿಶೀಲನೆ ವರದಿ ನೀಡುತ್ತಿರಲಿಲ್ಲ ಎನ್ನಲಾಗಿದೆ. ಈ ಕುರಿತು ಉಪತಹಸೀಲ್ದಾರ್ ಜಿ.ಬಿ. ಭಟ್ಟ ಅವರು ವಿಕ್ರಮಸಿಂಗ್ಗೆ ಕರೆ ಮಾಡಿ ವರದಿಯನ್ನು ಸರಿಯಾಗಿ ನೀಡುತ್ತಿಲ್ಲ ಯಾಕೆ ಎಂದು ಕೇಳಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಇಬ್ಬರೂ ಅವಾಚ್ಯವಾಗಿ ಬೈದಾಡಿಕೊಂಡಿದ್ದರಂತೆ. ನಂತರ ತಹಸೀಲ್ದಾರ್ ಕಚೇರಿಗೆ ಬಂದ ವಿಕ್ರಮಸಿಂಗ್, ಉಪತಹಸೀಲ್ದಾರ್ ಜಿ.ಬಿ. ಭಟ್ ಅವರಿಗೆ ಹೊಡೆದರು. ಜಿ.ಬಿ. ಭಟ್ ಸಹ ವಿಕ್ರಮಸಿಂಗ್ಗೆ ಮರಳಿ ಮರಳಿ ಹೊಡೆದರು. ಆಗ ಕಚೇರಿಯಲ್ಲಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿ ಜಗಳ ಬಿಡಿಸಿದ್ದಾರೆ. ನಂತರ ಕಚೇರಿಯಲ್ಲಿದ್ದ ಕೆಲ ಸಿಬ್ಬಂದಿ ಇಬ್ಬರನ್ನೂ ಕರೆದು ರಾಜಿಸಂಧಾನ ಮಾಡಲು ಪ್ರಯತ್ನ ನಡೆಸಿರುವುದು ಕಂಡು ಬಂದಿತು.
ವಿಷಯ ತಿಳಿದು ತಹಸೀಲ್ದಾರ್ ಕಚೇರಿಗೆ ತೆರಳಿದ ಸುದ್ದಿಗಾರರು ಕಂದಾಯ ನಿರೀಕ್ಷಕ ವಿಕ್ರಮಸಿಂಗ್ ಅವರನ್ನು ಕೇಳಿದಾಗ, ಅದು ನಮ್ಮಿಬ್ಬರ ವೈಯಕ್ತಿಕ ಜಗಳ, ನಿಮಗೇಕೆ ಎಂದು ದರ್ಪದಿಂದಲೆ ಉತ್ತರಿಸಿದರು. ವೈಯಕ್ತಿಕ ಜಗಳವಾಗಿದ್ದರೆ ಕಚೇರಿಯಿಂದ ಹೊರಗೆ ಮಾಡಿಕೊಳ್ಳಬಹುದಿತ್ತು. ಕಚೇರಿ ಒಳಗಡೆ ಕೆಲಸದ ಸಮಯದಲ್ಲಿ ಹೊಡೆದಾಟ ಮಾಡಿಕೊಂಡಿರಂತಲ್ಲ... ಎಂದು ಕೇಳಿದಾಗ ಮರು ಮಾತನಾಡದೆ ಕಚೇರಿಯಿಂದ ಹೊರ ನಡೆದರು. ಈ ಕುರಿತು ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಇಬ್ಬರಿಗೂ ನೋಟಿಸ್ ಜಾರಿ ಕಚೇರಿ ಕರ್ತವ್ಯದ ಸಮಯದಲ್ಲಿ ಇಬ್ಬರು ಅವಾಚ್ಯವಾಗಿ ಬೈದಾಡಿ ಹಲ್ಲೆ ಮಾಡಿಕೊಂಡು ದುರ್ನಡತೆ ತೋರಿರುವುದು ಕಂಡು ಬರುತ್ತದೆ. ಸರ್ಕಾರದ ನಿಯಮದಂತೆ ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು? ಈ ಕುರಿತು ಈ ನೋಟಿಸ್ ತಲುಪಿದ 24 ಗಂಟೆಯೊಳಗೆ ನನ್ನ ಸಮಕ್ಷಮ ಲಿಖಿತ ಉತ್ತರ ನೀಡಬೇಕು. ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಇಬ್ಬರಿಗೂ ತಹಸೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ.
ಕಂದಾಯ ಇಲಾಖೆ ಸಿಬ್ಬಂದಿ ಏನೇ ಸಮಸ್ಯೆ ಗಳಿದ್ದರೂ ತಮ್ಮ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಬಗೆಹರಿಸಿ ಕೊಳ್ಳಬೇಕು. ಕಾನೂನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲು ಎಸಿ ಹಾಗೂ ತಹಸೀಲ್ದಾರ್ಗೆ ಸೂಚಿಸುತ್ತೇನೆ. | ಶಿವರಾಮ ಹೆಬ್ಬಾರ ಶಾಸಕ ಇಬ್ಬರು ಅಧಿಕಾರಿ ಗಳು ಕಚೇರಿಯಲ್ಲಿ ವೈಯಕ್ತಿಕ ಕಾರಣ ದಿಂದ ಜಗಳ ಮಾಡಿಕೊಂಡಿ ರುವುದು ನಿಜ. ಜಗಳವಾದಾಗ ನಾನು ಕಚೇರಿಯಲ್ಲಿ ಇರಲಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತೇನೆ. | ಶಂಕರ ಗೌಡಿ ತಹಸೀಲ್ದಾರ್