ಬೆಳಗಾವಿ: ಅತಿವೃಷ್ಟಿ, ಕೋವಿಡ್-19, ಆದಾಯ ಕೊರತೆ ಇನ್ನಿತರ ಕಾರಣಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮಹಾನಗರ ಪಾಲಿಕೆ, ಇದೀಗ ಆದಾಯ ವೃದ್ಧಿಗಾಗಿ ವಾಣಿಜ್ಯ ಮಳಿಗೆಗಳತ್ತ ಚಿತ್ತ ಹರಿಸಿದೆ. ನಿಗದಿಯಂತೆ ಬಾಡಿಗೆ, ತೆರಿಗೆ ಕಟ್ಟದಿರುವ ಮಳಿಗೆಗಳನ್ನು ವಶಕ್ಕೆ ಪಡೆದು ಹೊಸದಾಗಿ ಬಾಡಿಗೆ ದರ ನಿಗದಿಸಲು ಮುಂದಾಗಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಖಾಲಿ ನಿವೇಶನ, ಸಮುದಾಯ ಭವನ, ಮಾರುಕಟ್ಟೆಗಳು, ವಾಣಿಜ್ಯ ಮಳಿಗೆಗಳು, ಕಟ್ಟಡಗಳು, ಶೆಡ್‌ಗಳು ಸೇರಿದಂತೆ ಸುಮಾರು 1.47 ಲಕ್ಷಕ್ಕೂ ಅಧಿಕ ಆಸ್ತಿಗಳಿವೆ. ಆದರೆ, ಅವುಗಳಲ್ಲಿ ಕೆಲ ಆಸ್ತಿಗಳ ಗುತ್ತಿಗೆ ಅವಧಿ ಮುಗಿದು ವರ್ಷಗಳೇ ಕಳೆದಿವೆ. ಅಂಗಡಿಕಾರರು ಬಾಡಿಕೆ, ತೆರಿಗೆ ಕಟ್ಟದೆ ಪಾಲಿಕೆಗೆ ವಂಚಿಸುತ್ತಿದ್ದಾರೆ.
ಪಾಲಿಕೆಗೆ ಆದಾಯ ನಷ್ಟ: ಕೆಲವು ಕಡೆ ಪಾಲಿಕೆ ವತಿಯಿಂದ ಹೊಸ ಕಟ್ಟಡ ಕಟ್ಟಲಾಗಿದ್ದರೂ ಬಳಕೆಯಾಗುತ್ತಿಲ್ಲ. ಅಲ್ಲದೆ, ಕಳೆದ 15 ವರ್ಷಗಳ ಹಿಂದಿನ ಬಾಡಿಗೆ ದರವೇ ಇಂದಿಗೂ ಚಾಲ್ತಿಯಲ್ಲಿರುವುದರಿಂದ ಪಾಲಿಕೆಗೆ ಲಕ್ಷಾಂತರ ರೂ. ಆದಾಯ ನಷ್ಟವಾಗುತ್ತಿದೆ. ಲಕ್ಷಾಂತರ ಆಸ್ತಿಗಳಿದ್ದರೂ ವಾರ್ಷಿಕ ಆದಾಯ ಮಾತ್ರ 40 ಕೋಟಿ ರೂ. ಇರುವುದು ಅಚ್ಚರಿ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕಂದಾಯ, ಆರ್ಥಿಕ ವಿಭಾಗದ ಅಧಿಕಾರಿಗಳು ಎಲ್ಲ ಆಸ್ತಿಗಳ ಮರುಮೌಲ್ಯಮಾಪನ ಮಾಡಿ, ತೆರಿಗೆ ಹಣ ವಸೂಲಿ ಮಾಡಲು ಹಾಗೂ ಹೊಸ ಬಾಡಿಗೆ ದರ ನಿಗದಿಪಡಿಸಿ ಕನಿಷ್ಠ 5 ವರ್ಷ ಹಾಗೂ ಗರಿಷ್ಠ 12 ವರ್ಷದ ವರೆಗೆ ಗುತ್ತಿಗೆ ನೀಡಲು ಯೋಜನೆ ರೂಪಿಸಿದೆ.
ಪಾಲಿಕೆಯು ಹೊಸದಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಮಾಸಿಕ ಬಾಡಿಗೆಯ ಆಧಾರದ ಮೇಲೆ ಸುಭಾಷ ನಗರದ ಕಂದಾಯ ವಿಭಾಗದ ವ್ಯಾಪ್ತಿಯ ಹಳೇ ಪಿಬಿ ರಸ್ತೆ, ಮಹಾತ್ಮ ಪುಲೆ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ 5 ಅಂಗಡಿಗಳು, ಕಸಾಯಿ ಗಲ್ಲಿಯ 20 ಮಳಿಗೆಗಳು, 1 ಸ್ಲಾಟರ್ ಹೌಸ್, 1 ಕುರಿ ಶೆಡ್, ಕೋನವಾಳ್ ಗಲ್ಲಿಯ 1 ಸ್ಲಾಟರ್ ಹೌಸ್, 1 ಕುರಿ ಶೆಡ್, ಒಂದು ಬ್ಲಾಕ್, ಮಾಳಮಾರುತಿ ಕಂದಾಯ ವಿಭಾಗದ ವ್ಯಾಪ್ತಿಯ 5 ಮಳಿಗೆಗಳು, ಅನಗೋಳ ಕಂದಾಯ ವಿಭಾಗದ ವ್ಯಾಪ್ತಿಯ 6 ಮಳಿಗೆಗಳು ಮತ್ತು ಒಂದು ಸಭಾಂಗಣ ಹಾಗೂ ಸರ್ದಾರ ಹೈಸ್ಕೂಲ್ ಮೈದಾನದಲ್ಲಿರುವ 4 ಮಳಿಗೆಗಳನ್ನು 12 ವರ್ಷದ ಅವಧಿಗೆ ಗುತ್ತಿಗೆ ನೀಡಲು ಹರಾಜು ಕರೆಯಲು ಆರಂಭಿಸಿದೆ. ಇವುಗಳ ಜತೆಗೆ ಹಳೇ ಮಳಿಗೆಗಳ ಅಭಿವೃದ್ಧಿಗೆ ಹೊಸದಾಗಿ ಟೆಂಡರ್ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಕಂದಾಯ ವಿಭಾಗದ ಆಯುಕ್ತ ಎಸ್.ಬಿ. ದೊಡ್ಡಗೌಡರ ತಿಳಿಸಿದ್ದಾರೆ.
ಪಾಲಿಕೆ ಒಡೆತನಕ್ಕೆ ಸೇರಿದ ಮಳಿಗೆಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ, ತೆರಿಗೆ ಬರುತ್ತಿರಲಿಲ್ಲ. ಅಂತಹ ಮಳಿಗೆಗಳನ್ನು ವಶಕ್ಕೆ ಪಡೆದು ಹೊಸ ಮಾರ್ಗಸೂಚಿ ಅನ್ವಯ ಬಾಡಿಗೆ ದರ ನಿಗದಿಪಡಿಸಲಾಗುತ್ತಿದೆ. ಅಲ್ಲದೆ, ಹೊಸ ನಿರ್ಮಿಸಿರುವ ಮಳಿಗೆಗಳನ್ನು ಬಾಡಿಗೆ ನೀಡಲು ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದ ಪಾಲಿಕೆಗೆ ಅಧಿಕ ಪ್ರಮಾಣದಲ್ಲಿ ಆದಾಯ ಬರಲಿದೆ.| ಕೆ.ಎಚ್. ಜಗದೀಶ, ಪಾಲಿಕೆ ಆಯುಕ್ತ, ಬೆಳಗಾವಿ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ