ಜಿಲ್ಲೆ

ಕಾಂಗ್ರೆಸ್‌ನಿಂದ ಸೇಡಿನ ರಾಜಕಾರಣ: ಬಿ.ವೈ.ವಿಜಯೇಂದ್ರ

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಇದು ಸೇಡಿನ ರಾಜಕಾರಣ ಅಲ್ಲವೇ? ಎಂದು ಪ್ರಶ್ನಿಸಿದರು.


ಸರ್ಕಾರ ಜನರ ಮೇಲೆ ಸೇಡಿನ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ತಕ್ಷಣವೇ ಸರ್ಕಾರದ ತೈಲ ಬೆಲೆ ಇಳಿಸಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆಯನ್ನು ಕೊಟ್ಟರೂ ಜನರು ಕಾಂಗ್ರೆಸ್‌ನ ಕೈ ಹಿಡಿಯಲಿಲ್ಲ. ಈ ಸಿಟ್ಟು ಸರ್ಕಾರಕ್ಕೆ ಇದೆ. ಹೀಗಾಗಿ ಜನ ವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.


ಉಪಚುನಾವಣೆ ನಡೆಯಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಕೊಡುವ ಅಥವಾ ತೆಗೆದುಕೊಳ್ಳವ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಜೂ.25 ರಂದು ದೆಹಲಿಗೆ ತೆರಳಿ ಹೈಕಮಾಂಡ್ ಜತೆಗೆ ಈ ವಿಚಾರ ಚರ್ಚೆ ಮಾಡಲಾಗುವುದು ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಸೇರಿ ಸಮಾಲೋಚನೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗುವುದು.

ಸಿ.ಪಿ.ಯೋಗೇಶ್ವರ್ ಅವರನ್ನು ಕರೆದು ಮಾತನಾಡುತ್ತೇನೆ. ಕಾಂಗ್ರೆಸ್‌ನಿಂದ ಯಾರೇ ಸ್ಪರ್ಧೆ ಮಾಡಲಿ ಅದು ಅವರಿಗೆ ಬಿಟ್ಟದ್ದು. ಜನರು ಮನಸ್ಸು ಮಾಡಿದರೆ ಎಂತಹ ಫಲಿತಾಂಶ ಬರುತ್ತದೆ ಎಂಬುದಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಫಲಿತಾಂಶವೇ ಸಾಕ್ಷಿ. ಯಾರು ಎಷ್ಟು ಬಲಾಢ್ಯರು ಎಂದುಕೊಂಡರೂ ಜನರ ತೀರ್ಮಾನವೇ ಅಂತಿಮ ಎಂದರು.


ಸಂಡೂರು ಕೈಗಾರಿಕಾ ವಲಯದ ವಿಚಾರದ ಕುರಿತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಪ್ರತಿ ನಿರ್ಧಾರದಲ್ಲೂ ಮೊಸರಲ್ಲಿ ಕಲ್ಲು ಹುಡುಕುವ ರೀತಿ ವರ್ತಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದೇ ಒಂದು ಕೈಗಾರಿಕೆಗಳು ಬರಲಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೈಗಾರಿಕೆಗಳನ್ನು ಸ್ಥಾಪಿಸಲು ಹೊರಟರೆ ಅದಕ್ಕೂ ತಕರಾರು ಮಾಡುತ್ತಿದೆ. ಎಲ್ಲದರಲ್ಲೂ ರಾಜಕೀಯ ಮಾಡುತ್ತಾ ಕುಳಿತರೆ ರಾಜ್ಯ ಅಭಿವೃದ್ಧಿ ಹೇಗೆ ಆಗುತ್ತದೆ? ಎಂದು ಪ್ರಶ್ನಿಸಿದರು.