ಜಿಲ್ಲೆ

ರಾಮಾಯಣದಲ್ಲಿ ಮಾನವೀಯ ಮೌಲ್ಯ ಅನಾವರಣ

ಕುಶಾಲನಗರ: ಮಹರ್ಷಿ ವಾಲ್ಮೀಕಿಯು ರಾಮಾಯಣ ಗ್ರಂಥದ ಮೂಲಕ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದ ದಾರ್ಶನಿಕ ಎಂದು ಶಾಸಕ ಡಾ.ಮಂತರ್‌ಗೌಡ ಬಣ್ಣಿಸಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ತಾಲೂಕು ಆಡಳಿತ , ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಮಾನ್ಯ ವ್ಯಕ್ತಿಯೊಬ್ಬ ಮಹಾಕಾವ್ಯ ರಚಿಸುವಷ್ಟರ ಮಟ್ಟಿಗೆ ಜ್ಞಾನ ಸಂಪಾದನೆ ಮಾಡಿ ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ ದಾರಿಯನ್ನು ಮಹರ್ಷಿ ವಾಲ್ಮೀಕಿ ತೋರಿಸಿಕೊಟ್ಟರು. ಇವರು ರಚಿಸಿದ ರಾಮಾಯಣ ಗ್ರಂಥದಲ್ಲಿರುವ ನೈತಿಕ ಮೌಲ್ಯಗಳು ಪ್ರತಿ ವ್ಯಕ್ತಿಯ ಜೀವನದಲ್ಲಿ ನಡೆಯುವ ಹಲವು ಘಟನೆಗಳಿಗೆ ಆದರ್ಶಪ್ರಾಯವಾಗಿದೆ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕನ್ನಡ ಭಾಷಾ ಅಧ್ಯಾಪಕ ವೆಂಕಟನಾಯಕ್ ಮಾತನಾಡಿ, ಇಡೀ ವಿಶ್ವಕ್ಕೆ ರಾಮಾಯಣದಂತಹ ಮಹಾಕಾವ್ಯ ಕೊಟ್ಟ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿ ಅವರ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವು ಕಲಿಯಬಹುದಾಗಿದೆ ಎಂದರು.

ಜಿಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ಆದಿಕವಿ ವಾಲ್ಮೀಕಿ ರಚಿಸಿರುವ ರಾಮಾಯಣದಲ್ಲಿ ಹಲವಾರು ಮಾನವೀಯ ಅಂಶಗಳು ಅಡಕವಾಗಿದ್ದು, ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹನೀಯರ ತತ್ವ-ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಮುನ್ನಡೆದಾಗ ಮಾತ್ರ ಅವರ ಜಯಂತಿ ಆಚರಣೆಗಳಿಗೆ ನಿಜವಾದ ಅರ್ಥ ಸಿಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಮಾತನಾಡಿ, ರಾಮಾಯಣದಲ್ಲಿ ಪ್ರೀತಿ, ತ್ಯಾಗ, ದೃಢತೆ ಮತ್ತು ಭಾವನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ವಾಲ್ಮೀಕಿ ಅವರು ಪ್ರಜಾಪ್ರಭುತ್ವದ ಸಮಗ್ರ ಪರಿಕಲ್ಪನೆಯನ್ನು ರಾಮಾಯಣದ ಮೂಲಕ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದರು.

ಸೋಮವಾರಪೇಟೆ ತಾಲೂಕು ತಹಸೀಲ್ದಾರ್ ನರಗುಂದ, ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ಜಯಣ್ಣ, ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್, ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರಾದ ಪರಮೇಶ್, ಚಂದನ, ನಿರ್ವಾಣಪ್ಪ, ಜಯಪ್ಪ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.