ಚನ್ನಗಿರಿ: ಮನುಷ್ಯ ಬಹಿರಂಗಕ್ಕಿಂತ ಅಂತರಂಗ ಶುದ್ಧಿಯಾಗಿ ಇಟ್ಟುಕೊಳ್ಳಬೇಕು. ನೈತಿಕವಾಗಿ, ಆಧ್ಯಾತ್ಮಿಕವಾಗಿ, ವೈಚಾರಿಕವಾಗಿ ಒಳ್ಳೆ ಮನಸ್ಸು ಹೊಂದಿರಬೇಕಾದರೆ ಮಠಗಳಲ್ಲಿ ನಡೆಸುವಂತ ಶಿವಾನುಭವ ಕಾರ್ಯಕ್ರಮಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ. ಗುರುಬಸವ ಶ್ರೀ ತಿಳಿಸಿದರು.
ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಏರ್ಪಡಿಸಿದ್ದ 850ನೇ ಮಾಸಿಕ ಶಿವಾನುಭವ ಹಾಗೂ ಶರಣ ಹಡಪದ ಅಪ್ಪಣ್ಣನವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಡಪದ ಅಪ್ಪಣ್ಣ ಕಾಯಕನಿಷ್ಠ ಶರಣ ವಚನಕಾರ. ಇಷ್ಟ ಲಿಂಗಾನುಭವಿ ಷಟಸ್ಥಲದ ಸಂಪನ್ಮೂಲ ಗುಣವುಳ್ಳ ವ್ಯಕ್ತಿ. ಬಸವಣ್ಣನವರ ಆಪ್ತಸಹಾಯಕ, ಅನುಭವ ಮಂಟಪದ ಮುಖ್ಯಶರಣರು ಕಾಯಕ ಸೇವೆ ಧಾರ್ಮಿಕತೆಗಳ ಬಗ್ಗೆ ನಿಷ್ಠೆ ಹೊಂದಿದವರಾಗಿದ್ದರು. 12ನೇ ಶತಮಾನದ ಕಲ್ಯಾಣದ ಬಹುತೇಕ ಶರಣರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಕಲ್ಯಾಣ ಕ್ರಾಂತಿಯ ಅನೇಕ ಘಟನೆಗಳಿಗೆ ಅಪ್ಪಣ್ಣ ಸಾಕ್ಷಿಯಾಗಿದ್ದಾರೆ ಎಂದರು.
ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ್ರು ಮಾತನಾಡಿ, ಯುವಕರಿಗೆ ಸಂಸ್ಕಾರದ ಪರಿಸರ ನೀಡಬೇಕಿದೆ. ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪಾಲಕರು ಇಂತಹ ಜವಾಬ್ದಾರಿ ನಿಭಾಯಿಸಬೇಕು. ಧಾರ್ಮಿಕ ವಿಚಾರಗೋಷ್ಠಿಗಳಿಗೆ ಮಹಿಳೆಯರು ಮತ್ತು ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಜೀವನದಲ್ಲಿ ಮಾಡಿದಂತ ತಪ್ಪುಗಳಿಗೆ ಧಾರ್ಮಿಕ ಕ್ಷೇತ್ರಗಳಲ್ಲಿನ ಶಿವಾನುಭವ ಗೋಷ್ಠಿಗಳಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೋಮಲಾಪುರ ಶತಾಯುಶಿ ಸಿ.ಎನ್. ಪಾರ್ವತಮ್ಮ ಅವರನ್ನು ಸನ್ಮಾನಿಸಲಾಯಿತು.