ವಿಜಯಪುರ: ರೇವತಗಾಂವ ಗ್ರಾಮದ ದೊಡ್ಡ ಹಳ್ಳದ ಪಕ್ಕದ ಜಮೀನುಗಳನ್ನು ಹೊಂದಿರುವ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಹಳ್ಳವನ್ನು ಒತ್ತುವರಿ ಮಾಡಿ ಬಾವಿಗಳನ್ನು ತೋಡಿಕೊಂಡು ಭೂಕಬಳಿಕೆ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದ ಹೊರವಲಯದಲ್ಲಿ ದಶಕಗಳ ಹಿಂದೆ ಇದ್ದ ವಿಸ್ತಾರವಾದ ಹಳ್ಳ ಇತ್ತೀಚೆಗೆ ಭೂಕಳ್ಳರ ಒತ್ತುವರಿಯಿಂದಾಗಿ ಕಿರಿದಾಗಿದೆ.ಹಳ್ಳವನ್ನು ಒತ್ತುವರಿ ಮಾಡಿಕೊಂಡು ಜಮೀನು ವಿಸ್ತರಣೆ ಮಾಡುತ್ತಿದ್ದಾರೆ. ಅವರಿಗೆ ಪರವಾನಗಿ ನೀಡಿದವರು ಯಾರು? ಪರವಾನಗಿ ಇಲ್ಲದೆ ರಾಜಾರೋಷವಾಗಿ ಹಳ್ಳ ಒತ್ತುವರಿ, ಹಳ್ಳದಲ್ಲಿ ಬಾವಿ ಹಾಗೂ 6-7 ಅಡಿಗಳಷ್ಟು ಆಳ ತೋಡಿ ಅವ್ಯಾಹತವಾಗಿ ಮರಳು ಮಾಫಿಯಾ ನಡೆಸಲಾಗುತ್ತಿದೆ.
ಕೂಡಲೇ ಗ್ರಾಮದ ಹಳ್ಳವನ್ನು ಸಂಪೂರ್ಣವಾಗಿ ಸರ್ವೇ ಮಾಡಿ ಜಮೀನು ಒತ್ತುವರಿ ಮಾಡಿದ ಭೂಕಳ್ಳರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕರೊನಾ ಹರಡದಂತೆ ಕ್ರಮ ಕೈಗೊಳ್ಳುವ ಕಾರ್ಯದಲ್ಲಿ ನಿರತರಾಗಿರುವುದರಿಂದ ಸಹಜಸ್ಥಿತಿಗೆ ಮರಳಿದ ತಕ್ಷಣ ಹಳ್ಳ ಸರ್ವೇ ಮಾಡಿಸಿ ಭೂ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಎನ್.ಬಿ. ಗೆಜ್ಜಿ, ತಹಸೀಲ್ದಾರ್, ಚಡಚಣ