ರೇವತಗಾಂವ: ಗ್ರಾಮದಲ್ಲಿ ದಸರಾ ಹಬ್ಬವನ್ನು 9 ದಿನಗಳ ಸಡಗರದಿಂದ ಆಚರಿಸಲಾಯಿತು. ದಸರಾ ಕೊನೇ ದಿನವಾದ ಭಾನುವಾರ ಬೆಳಗ್ಗೆ ಅಂಬಾಭವಾನಿ ದೇವಿಗೆ ಪೂಜೆ, ಮಂಗಳಾರತಿ, ನೈವೇದ್ಯ, ವಿಶೇಷ ಅಲಂಕಾರ ಸೇವೆ ನೆರವೇರಿದವು.
ಬೆಳಗಿನ ಜಾವ ಗ್ರಾಮದ ರೇವಣಸಿದ್ಧೇಶ್ವರರ ಪೂಜಾರಿ ಮಹಾದೇವನವರು ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬನ್ನಿ ತಂದು ದೇವಸ್ಥಾನದಲ್ಲಿ ಇಟ್ಟರು. ಸಂಜೆ 5 ಗಂಟೆಗೆ ದೇವಸ್ಥಾನದಿಂದ ಬನ್ನಿಯನ್ನು ಹಾಗೂ ಪೂಜಾರಿ ಮನೆಯಿಂದ ರೇವಣಸಿದ್ಧೇಶ್ವರರ ಪಲ್ಲಕ್ಕಿಯನ್ನು ವಾಲಿಕಾರರ ರಕ್ಷಣೆಯಲ್ಲಿ ಗ್ರಾಮದ ಪಾದಗಟ್ಟಿ ಹತ್ತಿರ ತರಲಾಯಿತು.
ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಬನ್ನಿ ಮುಡಿಯಲು ಸೇರಿದ್ದರು. ಪೂಜಾರಿಯಿಂದ ಬನ್ನಿಗೆ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರೆಲ್ಲರೂ ಬನ್ನಿ ಪಡೆಯಲು ಮುಗಿಬಿದ್ದರು. ನಂತರ ಗ್ರಾಮಸ್ಥರು ಗ್ರಾಮದ ದೇವರಿಗೆ ಬನ್ನಿ ಮುಡಿಸಿ, ದರ್ಶನ ಪಡೆದರು. ಪರಸ್ಪರ ಬನ್ನಿ ಕೊಡು-ಕೊಳ್ಳುವಿಕೆ ಮೂಲಕ ಶುಭಾಶಯ ವಿನಿಮಯಿಸಿಕೊಂಡರು.