ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೃಷಿ ಮಹಾವಿದ್ಯಾಲಯದ ಅಮೃತ ಮಹೋತ್ಸವ ನಿಮಿತ್ತ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಕಾಲೇಜಿನಲ್ಲಿ ಪದವಿ ಪಡೆದ 75 ವಿದ್ಯಾರ್ಥಿಗಳಿಂದ ಸಮ್ಮಿಲನದ ನೆನಪಿಗಾಗಿ ವಿವಿ ಆವರಣದಲ್ಲಿ ಅಮೃತವನ ಹೆಸರಿನಲ್ಲಿ 75 ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು.
ನಂತರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ನಿಷ್ಕಲ ಮಂಟಪದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ತಮ್ಮ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಕೈಗೊಂಡ ಅಭಿವೃದ್ಧಿ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಳೇ ವಿದ್ಯಾರ್ಥಿಗಳಿಂದ ಇಂದಿನ ಪದವೀಧರರಿಗೆ ನೀಡಬೇಕಾದ ಜ್ಞಾನ ದೀಕ್ಷೆ ಹಾಗೂ ಹಳೇ ಪದವೀಧರರು ಕೃಷಿ ಏಳಿಗೆಗೆ ಶ್ರಮಿಸಬೇಕಾದ ಅಗತ್ಯತೆ ಮಾಹಿತಿ ನೀಡಿದರು.
ಮಾಜಿ ಸಚಿವ ಶಿವಶಂಕರ ರೆಡ್ಡಿ ಮಾತನಾಡಿ, ಹಳೇ ವಿದ್ಯಾರ್ಥಿಗಳ ಹಾಗೂ ಕೃಷಿ ವಿವಿ ನಡುವಿನ ಅವಿನಾಭಾವ ಸಂಬಂಧ ಶ್ಲಾಘನೀಯ. ನಗರೀಕರಣದಿಂದ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಉತ್ಪಾದಕತೆ ಹೆಚ್ಚಿಸುವ ಮತ್ತು ಮಣ್ಣಿನ ಫಲವತ್ತತೆ, ನೈಸರ್ಗಿಕ ವಿಕೋಪಗಳ ಸೂಕ್ತ ನಿರ್ವಹಣೆ ಹಾಗೂ ಬೆಳೆನಷ್ಟ ಬಗ್ಗೆ ರೈತರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದರು.
ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಅಶೋಕ ದಳವಾಯಿ ಮಾತನಾಡಿದರು. ಶ್ರೀ ಶಿವಪೂರ್ಣಾನಂದ ಸ್ವಾಮೀಜಿ, ಡಾ.ವೈ.ಬಿ.ಪಾಟೀಲ, ಕೃವಿವಿ ನಿವೃತ್ತ ವಿದ್ಯಾಧಿಕಾರಿ ಡಾ. ಎ.ಎಸ್. ಪ್ರಭಾಕರ ಮಾತನಾಡಿದರು.
ಅಮೃತ ಮಹೋತ್ಸವದ ಡಿಜಿಟಲ್ ಸ್ಮರಣ ಸಂಚಿಕೆ ಹಾಗೂ ನವಚೇತನ ಮ್ಯಾಗಜಿನ್ ಬಿಡುಗಡೆ ಮಾಡಲಾಯಿತು. ಕೃಷಿಯಲ್ಲಿ ಸಾಧನೆ ಮಾಡಿದ ಕೃಷಿ ಪದವೀಧರರು ತಮ್ಮ ಅನುಭವ ಹಂಚಿಕೊಂಡರು.
ಕೃವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಮಂಡಳಿ ಸದಸ್ಯರು, ಕೃವಿವಿ ಕುಲಸಚಿವರು, ವಿಶ್ರಾಂತ ಕುಲಪತಿ, ಕೃಷಿ ಪದವೀಧರ ಸಂಘದ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಇತರರು ಇದ್ದರು.
ಡಾ. ಐ.ಕೆ. ಕಾಳಪ್ಪನವರ ವಂದಿಸಿದರು.