ಜಿಲ್ಲೆ

ಹೈಕೋರ್ಟ್‌ನಲ್ಲಿ ಕನ್ನಡ ತೀರ್ಪಿಗೆ ಮರುಚಾಲನೆ: ಕಸಾಪ ಅಧ್ಯಕ್ಷರ ಸಂತಸ

ಬೆಂಗಳೂರು: ಕರ್ನಾಟಕದ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಕನ್ನಡದಲ್ಲಿಯೇ ತೀರ್ಪು ಪ್ರಕಟಿಸುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದ್ದಾರೆ.

ಕನ್ನಡವು ನಿತ್ಯ ಜೀವನದ ಎಲ್ಲ ರಂಗದಲ್ಲಿಯೂ ಪರಿಣಾಮಕಾರಿಯಾಗಿ ಬಳಕೆಯಾಗಬೇಕು ಎನ್ನುವ ಕಸಾಪ ಆಶಯಕ್ಕೆ ಈ ತೀರ್ಪಿನಿಂದ ಇಂಬು ಸಿಕ್ಕಂತಾಗಿದೆ. ಈ ಹಿಂದೆ ನ್ಯಾಯಮೂರ್ತಿ ಅರಳಿ ನಾಗರಾಜು ಅವರು ಕನ್ನಡದಲ್ಲಿಯೇ ತೀರ್ಪನ್ನು ಪ್ರಕಟಿಸುವ ಮೂಲಕ ಹೊಸ ಪರಂಪರೆಯನ್ನು ಆರಂಭಿಸಿದ್ದರು. ಅದಕ್ಕೆ ಈಗ ಮರುಚಾಲನೆ ಸಿಕ್ಕಿರುವುದು ಸಂತೋಷದ ಸಂಗತಿ ಎಂದಿದ್ದಾರೆ.

ನ್ಯಾಯಾಲಯದ ತೀರ್ಪುಗಳು ಜನಸಾಮಾನ್ಯರಿಗೆ ಅರ್ಥವಾಗಬೇಕು ಎನ್ನುವ ಹಿನ್ನೆಲೆಯಲ್ಲಿ ಇಡೀ ತೀರ್ಪನ್ನು ಕನ್ನಡದಲ್ಲಿ ನೀಡಲಾಗಿದ್ದರೂ ತೀರ್ಪಿನ ಕ್ರಿಯಾಭಾಗವನ್ನಾದರೂ (ಅಪರೇಟಿವ್ ಭಾಗ) ಕನ್ನಡದಲ್ಲಿಯೇ ಬರೆಯಬೇಕು. ಇದರಿಂದ ದಾವೆದಾರರಿಗೆ ತೀರ್ಪು ಏನೆಂದು ತಿಳಿಯುತ್ತದೆ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹೇಳಿರುವುದು ಕನ್ನಡಪರವಾದ ಬಹುಮುಖ್ಯ ಪ್ರತಿಪಾದನೆ ಆಗಿದೆ ಎಂದು ಜೋಶಿ ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ಗೋಷ್ಠಿ:

ಮಂಡ್ಯದಲ್ಲಿ ನಡೆಯಲಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-2022: ಪರಿಣಾಮಕಾರಿ ಅನುಷ್ಠಾನದ ಕುರಿತು ನ್ಯಾಯಮೂರ್ತಿ ಅಶೋಕ ನಿಜಗಣ್ಣನವರ ಅಧ್ಯಕ್ಷತೆಯಲ್ಲಿ ಗೋಷ್ಠಿ ಏರ್ಪಡಿಸಲಾಗಿದ್ದು, ನ್ಯಾಯಾಧೀಶ ಬಿ. ಶಿವಲಿಂಗೇಗೌಡರು ನ್ಯಾಯಾಲಯದಲ್ಲಿ ಕನ್ನಡ ತೀರ್ಪುಗಳ ಕುರಿತು ಪ್ರಬಂಧ ಮಂಡಿಸಲಿದ್ದಾರೆ ಎಂದು ಮಹೇಶ ಜೋಶಿ ಎಂದು ಹೇಳಿದ್ದಾರೆ.