ಜಿಲ್ಲೆ

ನಿವೃತ್ತಿ ಜೀವನಕ್ಕೆ ಗಳಿಕೆಯ ಹಣವೇ ಆಸರೆ : ಕೊನೆಯವರೆಗೂ ಆಸ್ತಿ ಯಾರಿಗೂ ನೀಡಬೇಡಿ - ಎಂ.ಯು. ಚನ್ನಬಸಪ್ಪ ಸಲಹೆ

ಹರ್ಷ ನ.ಪುರೋಹಿತ
ಚನ್ನಗಿರಿ: "ದುಡಿದು ಗಳಿಸಿದ ಆಸ್ತಿ ಮತ್ತು ಹಣವನ್ನು ನಿವೃತ್ತ ನೌಕರರು ಕೊನೆಗಾಲದವರೆಗೆ ಯಾರಿಗೂ ನೀಡಬಾರದು, ಏಕೆಂದರೆ ಅದೇ ನಿಮ್ಮನ್ನು ರಕ್ಷಣೆ ಮಾಡುತ್ತದೆ," ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ (ಕಸಾಪ) ಮಾಜಿ ಅಧ್ಯಕ್ಷ ಎಂ.ಯು. ಚನ್ನಬಸಪ್ಪ ಅವರು ನಿವೃತ್ತ ನೌಕರರಿಗೆ ಕಿವಿಮಾತು ಹೇಳಿದರು.

ಪಟ್ಟಣದ ನಿವೃತ್ತ ಸರ್ಕಾರಿ ಭವನದಲ್ಲಿ ಶನಿವಾರ ತಾಲೂಕು ಕಸಾಪ ವತಿಯಿಂದ ಆಯೋಜಿಸಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯರಿಗೆ ಗೌರವವಿಲ್ಲದ ಸಮಾಜ

"ಇಂದು ಸಮಾಜದಲ್ಲಿ ಮಕ್ಕಳು ಪಾಲಕರನ್ನು ಸರಿಯಾಗಿ ಪೋಷಣೆ ಮಾಡದೆ ವೃದ್ಧಾಶ್ರಮಗಳಿಗೆ ಕಳುಹಿಸುವ ಸನ್ನಿವೇಶಗಳನ್ನು ಪ್ರತಿದಿನ ನೋಡುತ್ತಿದ್ದೇವೆ," ಎಂದು ಎಂ.ಯು. ಚನ್ನಬಸಪ್ಪ ಅವರು ಕಳವಳ ವ್ಯಕ್ತಪಡಿಸಿದರು.

  • ಜೀವನದ ಏರುಪೇರುಗಳನ್ನು ಕಂಡು, ಕಷ್ಟಪಟ್ಟು ದುಡಿದು, ಕುಟುಂಬವನ್ನು ನಿರ್ವಹಿಸಿದ ಸರ್ಕಾರಿ ನೌಕರರು ನಿವೃತ್ತಿಯಾದ ನಂತರ ವಯೋಸಹಜ ಕಾಯಿಲೆಗಳಿಗೆ ತುತ್ತಾಗುತ್ತಾರೆ.
  • ಆಗ ಮನೆಯಲ್ಲಿ ಹಿರಿಯರಿಗೆ ಗೌರವ ಸಿಗುವುದಿಲ್ಲ. ಅವರ ಹೆಸರಿನಲ್ಲಿರುವ ಆಸ್ತಿಯನ್ನು ಬರೆಸಿಕೊಂಡು ಮನೆಯಿಂದ ಹೊರಗೆ ಕಳುಹಿಸುತ್ತಾರೆ.
  • "ನಿಮ್ಮ ಹೆಸರಿನಲ್ಲಿ ಏನೇ ಇದ್ದರೂ ಕೊನೆಗಾಲದವರೆಗೆ ನಿಮ್ಮಲ್ಲಿಯೇ ಇರಲಿ. ನಾವು ಹೋದ ನಂತರ ಯಾರು ಉತ್ತರಾಧಿಕಾರಿ ಇರುತ್ತಾರೋ ಅವರು ತೆಗೆದುಕೊಳ್ಳುತ್ತಾರೆ," ಎಂದು ಅವರು ನಿವೃತ್ತ ನೌಕರರಿಗೆ ಸಲಹೆ ನೀಡಿದರು.

ಕಸಾಪದಿಂದ ಕನ್ನಡ ಸಂಸ್ಕೃತಿ ಪೋಷಣೆಯಾಗಲಿ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ನೌಕರ ಸಂಘದ ತಾಲೂಕು ಅಧ್ಯಕ್ಷ ಜಿ.ಎಂ. ಉಜ್ಜಿನಪ್ಪ, "ಕನ್ನಡ ಭಾಷೆ ಐದು ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದೆ. ಕಸಾಪ ದತ್ತಿ ಉಪನ್ಯಾಸಗಳ ಮೂಲಕ ನಮ್ಮ ನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಮನದಟ್ಟು ಮಾಡಿಕೊಡಬೇಕು. ಯುವ ಪೀಳಿಗೆಗೆ ಕನ್ನಡವನ್ನು ಪ್ರೀತಿಸುವ ಮಾರ್ಗದರ್ಶನ ಕಸಾಪದಿಂದ ಆಗಲಿ," ಎಂದು ಆಶಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಮಾತನಾಡಿ, "ಕನ್ನಡ ಮನೆ ಮನದ ಮಾತಾಗಬೇಕು. ನಮ್ಮ ಮನೆಯನ್ನು ಕಾಪಾಡುವ ಜವಾಬ್ದಾರಿ ನಮ್ಮದಾಗಬೇಕು. ಕನ್ನಡ ನಾಡಿನ ಮನೆಗಳಲ್ಲಿ ಕನ್ನಡದ ದೀಪ ಉರಿಯುವಂತಾಗಲಿ. ಆಗ ಮಾತ್ರ ನಮ್ಮ ನಾಡು, ನುಡಿ ಉಳಿಯಲು ಸಾಧ್ಯ," ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೆ.ಎಸ್. ವೀರೇಶ್ ಪ್ರಸಾದ್, ಆರ್.ಎಸ್. ಮಲ್ಲಿಕಾರ್ಜುನ ರಾಮಪ್ಪ, ಜಿ. ಚಿನ್ನಸ್ವಾಮಿ, ಓಂಕಾರಮೂರ್ತಿ, ಓಂಕಾರನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.