ಜಿಲ್ಲೆ

ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ, ನಿವೃತ್ತ ಶಿಕ್ಷಕ ಜಿ.ಎಸ್.ಶಿವನಗುತ್ತಿ ಸಲಹೆ

ಕುರುವತ್ತಿ ಶ್ರೀಕಾಂತಪ್ಪ

ಯಲಬುರ್ಗಾ: ಶಿಕ್ಷಕ ನಿರಂತರ ವಿದ್ಯಾರ್ಥಿಯಾಗಬೇಕು. ತಾನು ಕಲಿಯುತ್ತಲೇ ವಿದ್ಯಾರ್ಥಿಗಳಿಗೆ ಕಲಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಜಿ.ಎಸ್.ಶಿವನಗುತ್ತಿ ಹೇಳಿದರು.

ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ವಿಭಾಗ)ದಲ್ಲಿ 1989-90ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭವ್ಯ ಭಾರತದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ನಿರ್ಧಾರವಾಗುತ್ತದೆ. ಶಿಕ್ಷಕರು ಮೊಬೈಲ್ ಹಿಡಿದುಕೊಂಡು ಕಾಲಹರಣ ಮಾಡಿ, ಮಕ್ಕಳಿಗೆ ಅನ್ಯಾಯ ಮಾಡಬಾರದು. ಸಮಯ ಪರಿಪಾಲನೆ ಮಾಡುವ ಮೂಲಕ ವಿಷಯದ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ನ್ಯಾಯ ಒದಗಿಸಬೇಕು.

ಭೂಮಿಯ ಮೇಲೆ ಸ್ಥಿರವಾದದು ಯಾವುದೂ ಇಲ್ಲ. ಪ್ರತಿಯೊಂದೂ ಚಲಿಸುತ್ತದೆ. ನ್ಯಾಯಯುತವಾಗಿ ಶಿಕ್ಷಣ ಕೊಟ್ಟರೆ ಶಿಕ್ಷಕ ವೃತ್ತಿ ಸಾರ್ಥಕವಾಗುತ್ತದೆ. ಸಮಾಜದಲ್ಲಿ ಜಾಣತನದಿಂದ ಬಾಳಬೇಕು. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ತಮ್ಮ ವೃತ್ತಿ ಜೀವನದ ಸೇವೆ ನೆನೆಸಿಕೊಂಡು, ಶಾಲೆಯ ಇತಿಹಾಸ, ಸೇವೆ, ವರ್ಗಾವಣೆ ವೇಳೆ ತಾಪತ್ರಯ, ಅಂದಿನ ದಿನಮಾನಗಳಲ್ಲಿ ಸಹಕಾರ ನೀಡಿದ ಹಿರಿಯರನ್ನು ಸ್ಮರಿಸಿದರು.

ನಿವೃತ್ತ ಉಪಪ್ರಾಚಾರ್ಯ ಚಂದ್ರಕಾಂತಯ್ಯ ಕಲ್ಯಾಣಮಠ ಮಾತನಾಡಿ, ಗುರುಪರಂಪರೆ ಶ್ರೇಷ್ಠವಾದದು. ಅದಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎನ್ನುವುದನ್ನು ಮನಗಂಡು ಹಳೆಯ ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ವೃತ್ತಿ ಜೀವನದಲ್ಲಿ ಶಿಕ್ಷಕರು ತಮ್ಮತನ, ಸ್ವಾರ್ಥ ಬಿಟ್ಟು ಮಕ್ಕಳ ಏಳಿಗೆಗೆ ಶ್ರಮಿಸಬೇಕು ಎಂದರು.

ನಿವೃತ್ತ ಶಿಕ್ಷಕ ವಿ.ಬಿ.ನಿಡಶೇಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಬಗೆಗಿನ ವಿಧೇಯತೆ ಕಮ್ಮಿ ಆಗುತ್ತಿದೆ. ಕಲಿಸಿದ ಗುರುಗಳ ಬಗ್ಗೆ ಗೌರವ ಇರಬೇಕು ಎಂದರು. ಹಳೆಯ ವಿದ್ಯಾರ್ಥಿ ಪವನಕುಮಾರ ಕುಲಕರ್ಣಿ ಮಾತನಾಡಿದರು.

ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರಾದ ಜಿ.ಎಸ್.ಶಿವನಗುತ್ತಿ, ವೀರಭದ್ರಪ್ಪ ಬಳಿಗೇರ, ವೀರಪ್ಪ ಮಾಸ್ತರ ಸಜ್ಜನ್, ವಿ.ಬಿ.ನಿಡಶೇಸಿ, ಚಂದ್ರಕಾಂತಯ್ಯ ಕಲ್ಯಾಣಮಠ, ಶರಣಪ್ಪ ತಟ್ಟಿ, ಕಾಸೀಂಸಾಬ್ ಸಂಕನೂರು, ಶಿವಾನಂದಯ್ಯ ಅವರಿಗೆ ಹೂಮಳೆ ಸುರಿಸಿ ಕಾರ್ಯಕ್ರಮ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.