ಜಿಲ್ಲೆ

ಕಾಂತರಾಜ ವರದಿ ಅನುಷ್ಠಾನಕ್ಕೆ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶಚಂದ್ರಗುರು ಆಗ್ರಹ

ಮೈಸೂರು: ಯಾವುದೇ ರಾಜಕೀಯ, ಧಾರ್ಮಿಕ ಒತ್ತಡಗಳಿಗೆ ಮಣಿಯದೆ ಕಾಂತರಾಜ ಜಾತಿ ಗಣತಿ ವರದಿ ಜಾರಿಗೊಳಿಸುವ ಮೂಲಕ ಅವಕಾಶ ವಂಚಿತರಿಗೆ ಅವಕಾಶ ನೀಡಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶಚಂದ್ರಗುರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಕಾಂತರಾಜ ವರದಿ ಮನುವಾದಿಗಳ ನಿದ್ದೆಗೆಡಿಸಿದೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ವರದಿಗೆ ಇದುವರೆಗೆ ಜೀವ ಬಂದಿರಲಿಲ್ಲ. ಆರ್ಥಿಕ ಸಮಾನತೆಯನ್ನು ಎಲ್ಲ ರಾಜಕೀಯ ಪಕ್ಷಗಳೂ ನಿರಾಕರಿಸುತ್ತಲೇ ಬಂದಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಿದ್ದರಾಮಯ್ಯ ಅವರು ಈ ಹಿಂದೆ ಅಧಿಕಾರದಲ್ಲಿದ್ದಾಗ ಆಯೋಗಕ್ಕೆ ಜೀವ ಬಂದು, ಈಗ ಅವರೇ ಮುಖ್ಯಮಂತ್ರಿ ಆಗಿರುವ ವೇಳೆ ವರದಿ ಸಲ್ಲಿಸಲಾಗಿದೆ. ಎಲ್ಲರಿಗೂ ಜನಪರ ನ್ಯಾಯ ದೊರಕಬೇಕೆಂಬ ಆಶಯವನ್ನು ವರದಿ ಹೊಂದಿದ್ದು, ಇದು ವೈಜ್ಞಾನಿಕವಾಗಿಲ್ಲ ಎಂಬ ಟೀಕೆ ಪಟ್ಟಭದ್ರ ಹಿತಾಸಕ್ತಿಗಳಿಂದ ವ್ಯಕ್ತವಾಗಿದೆ. ಟೀಕೆ ಮಾಡುವವರು ಸಾಮಾಜಿಕ ನ್ಯಾಯದ ಪರ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿದರು.
ರಾಜ್ಯದಲ್ಲಿ ಇದುವರೆಗೂ ಬ್ರಾಹ್ಮಣರು, ಒಕ್ಕಲಿಗರು, ಕ್ಷತ್ರಿಯರ ಕಪಿಮುಷ್ಠಿಯಲ್ಲಿ ಅಧಿಕಾರ ಇತ್ತು. ಹೀಗಾಗಿ ಎಲ್ಲಿ ಅದನ್ನು ಕಳೆದುಕೊಳ್ಳುತ್ತೇವೆಯೋ ಎಂಬ ಆತಂಕದಿಂದ ವರದಿ ವಿರೋಧಿಸುತ್ತಿದ್ದಾರೆ. ವರದಿ ಯಥಾವತ್ತಾಗಿ ಜಾರಿಗೊಳ್ಳುವ ವಿಶ್ವಾಸವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆಲ್ಲವೂ ದೇಶಾದ್ಯಂತ ಈ ರೀತಿಯ ನ್ಯಾಯಪರವಾದ ವರದಿ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಮೀಸಲಾತಿ ಸರಿಯಾಗಿ ಹಂಚಿಕೆಯಾಗದೆ ರಾಜಕೀಯ ಸೇರಿದಂತೆ ಇನ್ನಿತರ ಸವಲತ್ತನ್ನು ಶೇ.20 ರಿಂದ 30ರಷ್ಟು ಜನಸಂಖ್ಯೆ ಇರುವ ಜನರೇ ಹಂಚಿಕೊಂಡಿದ್ದಾರೆ. ಕಾಂತರಾಜ ವರದಿ ಜಾರಿಯಾದಲ್ಲಿ ಅವನ್ನು ಕಳೆದುಕೊಳ್ಳುವ ಭೀತಿ ಇವರದ್ದಾಗಿದೆ. ಹೀಗಾಗಿ ವಿರೋಧಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ವರದಿ ಜಾರಿಗೊಳಿಸಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಪಗ್ರತಿಪರ ಸಂಘಟನೆಯ ಮುಖಂಡರಾದ ಸೋಮಯ್ಯ ಮಲೆಯೂರು, ಸಿದ್ದಸ್ವಾಮಿ, ವಿಷಕಂಠ ಇದ್ದರು.