ಚನ್ನಗಿರಿ: ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ ನಿಮಗೆ ಸಾಕಷ್ಟು ಅನುಭವ ಇರುತ್ತದೆ. ನಿಮ್ಮ ನಿವೃತ್ತಿ ಜೀವನವನ್ನು ಸಮಾಜದ ಅಭಿವೃದ್ಧಿಗೆ ಬಳಸಿ ಎಂದು ಕೆಎಸ್‌ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳು ವಿರೂಪಾಕ್ಷಪ್ಪ ಮನವಿ ಮಾಡಿದರು.
ಇಲ್ಲಿನ ಶ್ರೀ ಹಾಲಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನಿವೃತ್ತ ನೌಕರರ ತಾಲೂಕು ಸಂಘದ ಸಭೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ನಿಮ್ಮೆಲ್ಲರಿಗೂ ಇರುತ್ತದೆ. ತಾಲೂಕಿನ ಪ್ರಗತಿಗೆ ಅನುಕೂಲವಾಗುವ ಮಾಹಿತಿ ನೀಡಬೇಕು. ನಾವೆಲ್ಲ ಒಗ್ಗೂಡಿ ತಾಲೂಕನ್ನು ರಾಜ್ಯದಲ್ಲಿ ಮಾದರಿಯನ್ನಾಗಿಸೋಣ ಎಂದರು.
ನಗರದಲ್ಲಿರುವ ಚೆನ್ನಮ್ಮಾಜಿ ರಂಗಮಂದಿರದ ಕಟ್ಟಡ ತೆರವುಗೊಳಿಸಿ ಎಲ್ಲ ಕಚೇರಿಗಳು ಒಂದು ಸೂರಿನಡಿ ಕಾರ್ಯನಿರ್ವಹಿಸುವಂತೆ 9.5 ಕೋಟಿ ರೂ. ಅನುದಾನದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಪಕ್ಕದಲ್ಲಿರುವ ಖಾಲಿ ನಿವೇಶನ ಅನೇಕ ವರ್ಷಗಳಿಂದ ವಿವಾದಕ್ಕೆ ಸಿಲುಕಿದೆ. ಎರಡು ಕೋಮಿನವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಕುರಿತು ಎರಡು ಸಮುದಾಯಗಳ ಸಭೆ ಕರೆದು ಸಮಸ್ಯೆ ಪರಿಹರಿಸಲು ಪ್ರಯತ್ನ ಮಾಡಲಾಗುವುದು ಎಂದರು.
ಹಾಲಸ್ವಾಮಿ ಮಠದ ಶ್ರೀ ಬಸವ ಜಯಚಂದ್ರ ಸ್ವಾಮೀಜಿ, ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ತೀರ್ಥಪ್ಪ, ಕಸಾಪ ತಾಲೂಕು ಕಾರ್ಯದರ್ಶಿ ಎಂ.ಬಿ.ನಾಗರಾಜ್ ಕಾಕನೂರು, ಸರ್ಕಾರಿ ನೌಕರರ ಸಂಘದ ಜಗಳೂರು ತಾಲೂಕು ಅಧ್ಯಕ್ಷ ಪಾಲಯ್ಯ, ಜಿ.ರಂಗಸ್ವಾಮಿ, ಕುಸ್ತಿಪಟು ಮಾದಪ್ಪ, ಚಿನ್ನಸ್ವಾಮಿ ಇದ್ದರು.