ಜಿಲ್ಲೆ

ಕೊಲಿಜಿಯಂ ವ್ಯವಸ್ಥೆಯಲ್ಲಿ ದುರ್ಬಳಕೆಯೇ ಹೆಚ್ಚು...

ನಿವೃತ್ತ ನ್ಯಾ. ಎಚ್​.ಎನ್​. ನಾಗಮೋಹನದಾಸ್​ ಅಸಮಾಧಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆ ನಡೆಯುವಾಗ ಸಂವಿಧಾನಬದ್ಧವಾಗಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರಿಗೂ ಪ್ರಾತಿನಿಧ್ಯ ದೊರಕಬೇಕು. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಧೀಶರೇ ಮಾಡಿಕೊಂಡಿರುವ ಕೊಲಿಜಿಯಂ ವ್ಯವಸ್ಥೆಗೆ ನನ್ನ ವಿರೋಧ. ಧಿಕ್ಕಾರ ಎರಡೂ ಇದೆ. ಈ ವ್ಯವಸ್ಥೆಯಿಂದ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗಿದೆ. ಒಳಿತಿಗಿಂತ ಕೆಡುಕೇ ಹೆಚ್ಚಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್​.ಎನ್​. ನಾಗಮೋಹನದಾಸ್​ ಅಭಿಪ್ರಾಯಪಟ್ಟರು.

ಉಡುಪಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2022ರಿಂದ 25ರ ವರೆಗೆ ಸುಪ್ರೀಂಕೋರ್ಟ್​ಗೆ ಆಯ್ಕೆಯಾದ 18 ನ್ಯಾಯಮೂರ್ತಿಗಳಲ್ಲಿ ಒಬ್ಬರೂ ಮಹಿಳೆಯರಿಲ್ಲ. ಅವರಿಗೆ ಸಾಮರ್ಥ್ಯ ಇಲ್ಲವೆಂದು ಆಯ್ಕೆಯಾಗದೇ ಇರುವುದಲ್ಲ, ಮಹಿಳೆಯನ್ನು ಆಯ್ಕೆ ಮಾಡುವ ಮನಸ್ಥಿತಿ ಇಲ್ಲದಿರುವುದು ಕಾರಣವಾಗಿದೆ ಎಂದರು.

ಪ್ರತಿಭೆಗಳಿಗೆ ಅನ್ಯಾಯ

ನ್ಯಾಯಾಧೀಶರ ಶಿಫಾರಸಿನ ಮೇಲೆ ಇತರ ಹೈಕೋರ್ಟ್​ ಅಥವಾ ಸುಪ್ರೀಂಕೋರ್ಟ್​ನಲ್ಲಿ ನ್ಯಾಯಧೀಶರನ್ನು ಆಯ್ಕೆ ಮಾಡುವುದು ಸರಿಯೇ? ಕೊಲಿಜಿಯಂ ವ್ಯವಸ್ಥೆಯಿಂದ ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಧೀಶರಾಗಿರುವ ಅನೇಕ ಪ್ರತಿಭಾವಂತರು ಹೈಕೋರ್ಟ್​, ಸುಪ್ರೀಂ ಕೋರ್ಟ್​ನಲ್ಲಿ ಜಡ್ಜ್​ ಆಗುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ನ್ಯಾಯಧೀಶರ ಆಯ್ಕೆಯು ಒಂದೆರಡು ಪ್ರಾಂತಕ್ಕಷ್ಟೇ ಸೀಮಿತವಾಗದೆ ದೇಶವ್ಯಾಪಿ ಆಗಬೇಕಿದೆ. ಈ ಆಶಯ ಈಡೇರಬೇಕಾದರೆ ಸಂವಿಧಾನಬದ್ಧ, ಸೂಕ್ತ ಮಾರ್ಗದರ್ಶಿ ವ್ಯವಸ್ಥೆಯ ಅಗತ್ಯತೆ ಇದೆ ಎಂದರು.

ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ

ಯುವಪೀಳಿಗೆ ಸೇರಿದಂತೆ ಸಾರ್ವಜನಿಕರಿಗೆ ಸಂವಿಧಾನದ ಮೌಲ್ಯ ತಲುಪಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ವ್ಯಾಪ್ತಿಯಲ್ಲಿ ಸಂವಿಧಾನ ಓದು ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಕಾಲೇಜ್​ ವಿದ್ಯಾರ್ಥಿಗಳು, ಸಮಾಜಮುಖಿ ಸಂಘಟನೆಗಳೊಂದಿಗೆ ಸೇರಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನ್ಯಾ. ನಾಗಮೋಹನದಾಸ್​ ತಿಳಿಸಿದರು.