ಜಿಲ್ಲೆ

ಬೇರೆಯವರ ಹೊಟ್ಟೆಯ ಮೇಲೆ ಹೊಡೆದು ಸಂಪಾದನೆ ಮಾಡಬೇಡಿ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಜೀವನದ ಅಗತ್ಯತೆಗೆ ಹಣ ಸಂಪಾದನೆ ಅನಿವಾರ್ಯವಾಗಿದ್ದು ಅದನ್ನು ಕಷ್ಟಪಟ್ಟು ಕಲಿತ ವಿದ್ಯೆಯಿಂದ ನ್ಯಾಯ ಮತ್ತು ರಾಜಾಮಾರ್ಗದಲ್ಲಿ ಸಂಪಾದನೆ ಮಾಡಬೇಕೆ ಹೊರತು ಇನ್ನೊಬ್ಬರ ಜೇಬಿನಿಂದ ಕಸಿಯುವುದಾಗಲಿ, ಬೇರೆಯವರ ಹೊಟ್ಟೆಯ ಮೇಲೆ ಹೊಡೆದು ಸಂಪಾದನೆಗೆ ಇಳಿಯಬಾರದು ಎಂದು ನಿವೃತ್ತ ನ್ಯಾಯಮೂರ್ತಿ ಎನ್​.ಸಂತೋಷ ಹೆಗಡೆ ಹೇಳಿದರು.

ನಗರದ ಶ್ರೀದೇವಿ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ ವತಿಯಿಂದ ಪಾವಗಡದ ಶ್ರೀಶಾರದಾ ದೇವಿ ಕಣ್ಣಿನ ಆಸ್ಪತ್ರೆ, ಬೆಂಗಳೂರಿನ ನಯೋನಿಕ್​ ಐಕೇರ್​ ಟ್ರಸ್ಟ್​, ಡಾ.ಚಂದ್ರಶೇಖರ್​ ಸ್ಪೀಚ್​ ಅಂಡ್​ ಹಿಯರಿಂಗ್​ ಇನ್ಸ್​ಸ್ಟಿಟ್ಯೂಟ್​, ಜಿಲ್ಲಾ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಆರಂಭಿಸಿರುವ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ನೂತನ ಆರೋಗ್ಯ ಯೋಜನೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜ ಕೆಟ್ಟು ಹೋಗಿದೆ ಎಂದು ಬರೀ ಕಾಲಹರಣ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ದೇಶದ ಯುವಜನತೆಗೆ ಇದೆ. ಅವರು ಮನಸ್ಸು ಮಾಡಿದರೆ, ಸಂಕಲ್ಪ ತೊಟ್ಟರೆ ಉತ್ತಮ ಸಮಾಜ ನಿರ್ಮಿಸಬಹುದು ಎಂದರು.

ಮನುಷ್ಯ ದುರಾಸೆಗೆ ಬಿದ್ದು ಶ್ರೀಮಂತನಾಗಲು ಹವಣಿಸುತ್ತಿದ್ದಾನೆ. ಸಮಾಜದ ಎಲ್ಲಾ ಸಮಸ್ಯೆಗಳಿಗೆ ಇದೇ ಮೂಲ. ಜೈಲಿಗೆ ಹೋಗಿ ಬಂದವರನ್ನು ಹೂವಿನ ಹಾರ ಹಾಕಿ ಸನ್ಮಾನ ಮಾಡುವ ಸ್ಥಿತಿಯಲ್ಲಿ ನಾವಿದ್ದೇವೆ. ಇದು ಶೋಚನೀಯ. ಕ್ಯಾನ್ಸರ್​, ಕರೊನಾ ದಂತಹ ಮಾರಕ ರೋಗಳಿಗೆ ಮದ್ದಿದೆ. ಆದರೆ, ದುರಾಸೆಗೆ ಯಾವುದೇ ಮದ್ದಿಲ್ಲ. ಜೀವನದಲ್ಲಿ ಏನು ಆಗುವ ಮೊದಲು ಮಾನವನಾಗು, ಮಾನವೀಯತೆಯನ್ನು ಬೆಳೆಸಿಕೊಳ್ಳದೇ ಹೋದರೆ ಜೀವನ ಸಾರ್ಥಕವಾಗುವುದಿಲ್ಲ. ತೃಪ್ತಿ ಮತ್ತು ಮಾನವೀಯತೆ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಸಲಹೆಯಿತ್ತರು.

ಗ್ರಾಮೀಣ ಸೇವೆಗೆ ವೈದ್ಯರು ಸಂಕಲ್ಪ ಮಾಡಲಿ: ವೈದ್ಯರೇ ದೇಶದ ಆಸ್ತಿ, ಭವಿಷ್ಯ. ಪಾವಗಡ ತಾಲೂಕಿನ 800 ಮಕ್ಕಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ನುರಿತ ವೈದ್ಯರಿಂದ ಬೆಳಕು ಮೂಡಿಸಲಾಗಿದೆ. ಹಳ್ಳಿ ಜೀವನ ಕಷ್ಟಕರವಾಗಿದೆ ವೈದ್ಯರು ಕಡೆ ಪಕ್ಷ ಒಂದು ಅಥವಾ ಎರಡು ವರ್ಷವಾದರೂ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಸಂಕಲ್ಪ ಮಾಡುವ ಹೃದಯವಂತಿಕೆ ಮೆರೆಯಬೇಕು ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ ಜೀ ಹೇಳಿದರು.

ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್​.ಹುಲಿನಾಯ್ಕರ್​ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಿಯೋನಿಕ್​ ಸಂಸ್ಥೆ ಮಕ್ಕಳ ಕಣ್ಣಿನ ದೋಷ ನಿವಾರಣೆಗಾಗಿ ಉತ್ತಮ ಕೆಲಸ ಮಾಡುತ್ತಿದೆ. ರಾಜ್ಯಾದ್ಯಂತ 13 ಕೇಂದ್ರಗಳನ್ನು ಸ್ಥಾಪಿಸಿ ಮಕ್ಕಳಲ್ಲಿನ ಕಣ್ಣಿನ ದೋಷ ನಿವಾರಣೆ ಮಾಡಿ ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಇಂತಹ ಮಾನವೀಯ ಕೆಲಸಕ್ಕೆ ಶ್ರೀದೇವಿ ಮೆಡಿಕಲ್​ ಕಾಲೇಜು ಸಂಶೋಧನಾ ಕೇಂದ್ರ, ಸದಾ ಬೆಂಬಲ- ಸಹಕಾರ ನೀಡಲಿದೆ. ಇಂತಹ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.

ಡಾ.ಎಸ್​.ಆರ್​. ಚಂದ್ರಶೇಖರ್​ ಇನ್ಸ್​ಸ್ಟಿಟ್ಯೂಟ್​ನ ವಾಕ್​ ಮತ್ತು ಶ್ರವಣ ಕಾರ್ಯದರ್ಶಿ ಸಿ.ಎ. ಸುರೇಶ್​ ಬಾಬು, ಖಜಾಂಚಿ ವಿ.ಎಸ್​.ಶಾಂತವದನ, ಶ್ರೀದೇವಿ ವೈದ್ಯಕಿಯ ನಿರ್ದೇಶಕ ಡಾ.ರಮಣ್​ ಎಂ ಹುಲಿನಾಯ್ಕರ್​, ಶ್ರೀದೇವಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್​.ಪಾಟೀಲ್​, ಶ್ರೀದೇವಿ ಚಾರಿಟಬಲ್​ ಟ್ರಸ್ಟ್​ನ ಟ್ರಸ್ಟಿ ಡಾ.ಲಾವಣ್ಯ, ನಿಯೋನಿಕಾ ಐ ಕೇರ್​ ಚಾರಿಟಬಲ್​ ಟ್ರಸ್ಟ್​ ಅಧ್ಯಕ್ಷ ಡಾ.ಪ್ರಶಾಂತ್​, ಪತ್ರಿಕೋದ್ಯಮಿ ಎಸ್​.ನಾಗಣ್ಣ ಮತ್ತಿತರರು ಉಪಸ್ಥಿತರಿದ್ದರು.