oplus_0 
ಜಿಲ್ಲೆ

ಡೇರಿ ನಿವೃತ್ತ ಕಾರ್ಯದರ್ಶಿಗಳಿಗೆ 5 ಲಕ್ಷ ರೂ. ಇಡಿಗಂಟು

ಮುಳಬಾಗಿಲು: ಕೋಚಿಮುಲ್​ 14 ಕೋಟಿ ರೂ. ನಷ್ಟದಲ್ಲಿದ್ದ ಕಾರಣ ಡೇರಿ ಕಾರ್ಯದರ್ಶಿಗಳು ನಿವೃತ್ತರಾದಾಗ ಕೊಡುವ 3 ಲಕ್ಷ ರೂ.ಗೆ ಆಡಳಿತ ಮಂಡಳಿ ಸಲಹೆ ಮೇರೆಗೆ ತಾತ್ಕಾಲಿಕ ತಡೆ ನೀಡಿದ್ದು, ಮುಂದೆ 5 ಲಕ್ಷ ರೂ.ಗೆ ಏರಿಕೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೋಮುಲ್​ ಮುಳಬಾಗಿಲು ಪೂರ್ವ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್​.ನಾಗರಾಜ್​ ತಿಳಿಸಿದರು.

ಕೋಮುಲ್​ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ಕೋಮುಲ್​ನಲ್ಲಿ ಸೋಲಾರ್​ ವಿದ್ಯುತ್​ ಘಟಕ ನಿಮಾರ್ಣ ಮಾಡಿರುವುದರಿಂದ ಪ್ರತಿ ತಿಂಗಳು 2 ಕೋಟಿ ರೂ. ಉಳಿಯುತ್ತದೆ. ಇದರಿಂದ ವರ್ಷಕ್ಕೆ 24 ಕೋಟಿ ರೂ. ಲಾಭವಾಗುತ್ತದೆ. ಇದರಿಂದ ಸಂಸ್ಥೆ ಲಾಭದಾಯಕವಾಗಲಿದ್ದು, ರೈತರಿಗೆ ಹಾಲಿನ ಬೆಲೆ ಹೆಚ್ಚಿಸಲು ಸುಲಭವಾಗುತ್ತದೆ ಎಂದರು.

ಸಹಕಾರಿ ಸಂಸ್ಥೆ ಉಳಿವಿಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಅರಿವಿನಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅದು ಬಿಟ್ಟರೆ ಯಾವುದೇ ರೀತಿಯ ಡೇರಿ ಅಧ್ಯಕ್ಷರು, ಕಾರ್ಯದರ್ಶಿಗಳ ಮೇಲೆ ದಬ್ಬಾಳಿಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ಬಾರಿ ನಿರ್ದೇಶಕ ಸ್ಥಾನದ ಚುನಾವಣೆ ಅಗ್ನಿಪರೀಕ್ಷೆಯಾಗಿತ್ತು. ಜೆಡಿಎಸ್​ ಡೇರಿ ಅಧ್ಯಕ್ಷರು ಸೇರಿ ಮತದಾರರೇ ಬೆನ್ನಿಗೆ ಚೂರಿ ಹಾಕಿದರು. ಶಾಸಕ ಸಮೃದ್ಧಿ ವಿ.ಮಂಜುನಾಥ್​ ಶ್ರಮವಹಿಸಿದ ಪರಿಣಾಮ ಜೆಡಿಎಸ್​ 2 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿದೆ ಎಂದರು.

ಕೋಮುಲ್​ ಮುಳಬಾಗಿಲು ಪಶ್ಚಿಮ ನಿರ್ದೇಶಕ ಬಿ.ವಿ. ಸಾಮೇಗೌಡ ಮಾತನಾಡಿ, 1987ರಿಂದ ಇದುವರೆಗೂ ಕೋಮುಲ್​, ಕೋಚಿಮುಲ್​ ನಿರ್ದೇಶಕ ಸ್ಥಾನದಲ್ಲಿ ಜೆಡಿಎಸ್​ ನಿಂದ ಪ್ರಾಬಲ್ಯ ಮರೆಯಾಗಿತ್ತು. ಈಗ ಎರಡು ಕ್ಷೇತ್ರಗಳಲ್ಲೂ ಜೆಡಿಎಸ್​ ತೆನೆ ಅರಳಿದ್ದು, ಇದನ್ನು ಕಾಪಾಡಿಕೊಂಡು ಹೋಗೋಣ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್​.ಮುರಳಿ, ಮುಖಂಡರಾದ ಗೊಲ್ಲಹಳ್ಳಿ ಪ್ರಭಾಕರ್​, ಜಿ.ಎಸ್​.ಜಗದೀಶ್​, ಕೋಮುಲ್​ ಉಪವ್ಯವಸ್ಥಾಪಕ ಡಾ.ಕಿರಣ್​, ವಕೀಲರಾದ ಯಲುವಹಳ್ಳಿ ಆರ್​.ಅಶೋಕ್​ ಕುಮಾರ್​, ಬೇವಹಳ್ಳಿ ಶಂಕರ್​, ಹರೀಶ್​, ಜೆಡಿಎಸ್​ ಮುಖಂಡರಾದ ಅನಂತಪದ್ಮನಾಭರಾವ್​, ಬೇವಹಳ್ಳಿ ಶಂಕರಪ್ಪ, ಬೆಳಗಾನಹಳ್ಳಿ ವೆಂಕಟರಮಣಪ್ಪ, ಪಿ.ಎಸ್​. ವರದರಾಜಪ್ಪ, ಡೆಕ್ಕನ್​ ಶ್ರೀನಿವಾಸ್​, ಡೇರಿ ನೌಕರರ ಸಂಘದ ಅಧ್ಯಕ್ಷ ಚಿನ್ನಹಳ್ಳಿ ಗೋಪಾಲ್​ ಇದ್ದರು.