ಮೈಸೂರು: ಯುನೆಸ್ಕೋ ಅಂಗಸಂಸ್ಥೆಯಾದ ಇಟಲಿಯಲ್ಲಿರುವ ದಿ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ (ಟಿಡಬ್ಲುೃಎಎಸ್) ನೀಡುವ ಪ್ರತಿಷ್ಠಿತ ಫೆಲೋಶಿಪ್‌ಗೆ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಆಯ್ಕೆಗೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಈ ಫೆಲೋಶಿಪ್ ಪಡೆದ ಏಕೈಕ ಭಾರತೀಯರಾಗಿದ್ದಾರೆ.
ದೇಶದ ಹೆಮ್ಮೆಯ ವಿಜ್ಞಾನಿ ಸಿಎನ್‌ಆರ್ ರಾವ್ ಸೇರಿದಂತೆ ಹಲವು ಪ್ರಮುಖ ವಿಜ್ಞಾನಿಗಳು ಈವರೆಗೆ ಟಿಡಬ್ಲುೃಎಎಸ್ ಫೆಲೋಶಿಪ್ ಪಡೆದಿದ್ದಾರೆ. ಪ್ರೊ.ಕೆೆ.ಎಸ್. ರಂಗಪ್ಪ ಅವರು 40 ವರ್ಷದಿಂದ ವಿಜ್ಞಾನ ಕ್ಷೇತ್ರದಲ್ಲಿ ಕೈಗೊಂಡ ಸಂಶೋಧನೆಯನ್ನು ಪರಿಗಣಿಸಿ ಅವರನ್ನು ಫೆಲೋಶಿಪ್‌ಗೆ ಆಯ್ಕೆ ಮಾಡಲಾಗಿದೆ. ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಈ ಫೆಲೋಶಿಪ್ ಪಡೆದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ರಂಗಪ್ಪ ಪಡೆದುಕೊಂಡಿದ್ದಾರೆ.
ವಿಜ್ಞಾನ ಕ್ಷೇತ್ರದಲ್ಲಿ 11 ಪೇಟೆಂಟ್‌ಗಳನ್ನು ಹೊಂದಿದ್ದೇನೆ. ಈ ಪೈಕಿ ಎರಡು ಪೇಟೆಂಟ್‌ಗಳು ಕಮರ್ಷಿಯಲ್ ಪೇಟೆಂಟ್‌ಗಳಾಗಿವೆ. ವಿಶ್ವ ವಿದ್ಯಾಲಯದ ಮಟ್ಟದಲ್ಲಿ ಕಮರ್ಷಿಯಲ್ ಪೇಟೆಂಡ್ ಪಡೆದವರು ತೀರಾ ವಿರಳ. ನಿವೃತ್ತನಾದ ನಂತರ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಸಮಯವನ್ನು ನೀಡುತ್ತಿದ್ದೇನೆ. ನನ್ನ ಕಾರ್ಯವೈಖರಿಯನ್ನು ಗಮನಿಸಿ ಫೆಲೋಶಿಪ್ ನೀಡಿರುವುದು ಸಂತಸ ಉಂಟು ಮಾಡಿದ್ದು, ಇದು ದೇಶಕ್ಕೆ ಹೆಮ್ಮೆ ತರುವ ವಿಚಾರ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಟಿಡಬ್ಲುೃಎಎಸ್ ಫೆಲೋಶಿಪ್ ಪಡೆಯುವುದು ಸಾಮಾನ್ಯವಾದ ಮಾತೇನು ಅಲ್ಲ. ಈ ಸಮಿತಿಯಲ್ಲಿ ನೊಬೆಲ್ ಪುರಸ್ಕೃತ ವಿಜ್ಞಾನಿ ಗಳು, ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು ಇರುತ್ತಾರೆ. ಅವರೆಲ್ಲರು ಪರಾಮರ್ಶೆ ನಡೆಸಿದ ನಂತರ ಅತ್ಯುತ್ತಮ ವಿಜ್ಞಾನಿಗಳನ್ನು ಫೆಲೋಶಿಪ್‌ಗೆ ಅಯ್ಕೆ ಮಾಡುತ್ತಾರೆ. ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಪರಿಹರಿಸುವಲ್ಲಿ ವೈಜ್ಞಾನಿಕ ಸಂಶೋಧನೆಯನ್ನು ಉತ್ತೇಜಿಸುವ ಉದ್ದೇಶವನ್ನು ಟಿಡಬ್ಲುೃಎಎಸ್ ಸಂಸ್ಥೆಯನ್ನು ಹುಟ್ಟುಹಾಕಲಾಯಿತು ಎಂದರು.
ನನಗೆ ಟಿಡಬ್ಲುೃಎಎಸ್ ಫೆಲೋಶಿಪ್ ದೊರೆತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ದೇಶದ ಯುವ ವಿಜ್ಞಾನಿಗಳಿಗೆ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಉತ್ತೇಜನ ನೀಡಲು ಸಹಕಾರಿಯಾಗಲಿದೆ. ಈ ಫೆಲೋಶಿಪ್ ಕೆಲವು ವರ್ಷಗಳಿಂದ ಮಾತ್ರ ಸೀಮಿತವಾದುದ್ದಲ್ಲ, ಆಜೀವ ಪರ್ಯಂತ ಇರಲಿದೆ. ಅದುವರೆಗೆ ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದಂತೆ ಟಿಡಬ್ಲುೃಎಎಸ್‌ನಿಂದ ಪ್ರೋತ್ಸಾಹ ಧನ ದೊರೆಯುತ್ತದೆ. ಆ ಅನುದಾನವನ್ನು ಬಳಕೆ ಮಾಡಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಕ್ಯಾನ್ಸರ್‌ಗೆ ಔಷಧ ಕಂಡು ಹಿಡಿಯುವ ಸಂಶೋಧನೆ ಪ್ರಗತಿಯಲ್ಲಿದ್ದು, ಚೀನಾದ ವಿಶ್ವ ವಿದ್ಯಾಲಯದೊಂದಿಗೆ ಸಂಶೋಧನೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆದರೆ, ಇತ್ತೀಚೆಗೆ ಚೀನಾ ಹಾಗೂ ಭಾರತದ ಸಂಬಂಧ ಉತ್ತಮವಾಗಿಲ್ಲದ ಹಿನ್ನೆಲೆಯಲ್ಲಿ ಸಂಶೋಧನೆಗೆ ಸಂಬಂಧಿಸಿದಂತೆ ಅನುದಾನ ಪಡೆಯಲು ಹಿನ್ನಡೆಯಾಗಿದೆ ಎಂದು ಹೇಳಿದರು.